ಬೆಂಗಳೂರು, ಮಾ 19 ( Daijiworld News/MSP): ಕೊರೊನಾ ವೈರಸ್ ಹಿನ್ನೆಲೆಯಲ್ಲಿ, ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರ ಕೈ ಮೇಲೆ ಮುದ್ರೆ ಹಾಕಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಹಿಂದೆ ಮಹಾರಾಷ್ಟ್ರ ಸರ್ಕಾರವೂ ಇದೇ ರೀತಿ ಸೋಂಕಿತ ವ್ಯಕ್ತಿಗಳನ್ನು ಗುರುತಿಸಲು ಸುಲಭವಾಗುತ್ತದೆ ಎಂದು ಕೈಗಳಿಗೆ ಮುದ್ರೆ ಹಾಕುವುದನ್ನು ಜಾರಿಗೊಳಿಸಿತ್ತು.
ಭಾರತದಲ್ಲಿ ಸೋಂಕು ಹರಡಲು ಪ್ರಮುಖ ಕಾರಣ ವಿದೇಶದಿಂದ ಬಂದ ಪ್ರಜೆಗಳಾಗಿದ್ದು, ರಾಜ್ಯದಲ್ಲೂ ಹೀಗೆ ವಿದೇಶಕ್ಕೆ ಭೇಟಿ ಕೊಟ್ಟು ವಾಪಸ್ಸಾಗಿರುವ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಸೋಂಕು ಹರಡುವುದನ್ನು ತಡೆಗಟ್ಟಲು ವಿದೇಶದಿಂದ ರಾಜ್ಯಕ್ಕೆ ಹಿಂದಿರುಗುತ್ತಿರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರ ಮುದ್ರೆ ಹಾಕುವ ಕ್ರಮ ತೆಗೆದುಕೊಂಡಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ ಕೈ ಮೇಲೆ ಸ್ಟ್ಯಾಂಪಿಂಗ್ ಮಾಡಲು ಸಿಬ್ಬಂದಿಗೆ ಸರ್ಕಾರ ಸೂಚಿಸಿದೆ. ಆದ್ದರಿಂದ ವಿಮಾನ ನಿಲ್ದಾಣದ ಸಿಬ್ಬಂದಿ ವಿದೇಶದಿಂದ ಬಂದ ಪ್ರಯಾಣಿಕರ ಕೈ ಮೇಲೆ ಸ್ಟ್ಯಾಂಪಿಂಗ್ ಮಾಡಿ ಗುರುತಿಸುತ್ತಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮುಂಜಾಗೃತ ಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೈಗಳ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ತಿಳಿಸಿದ್ದಾರೆ.