ಮುಂಬೈ, ಮಾ.19 (DaijiworldNews/PY) : ಕೊರೊನಾ ವೈರಸ್ ಹಿನ್ನೆಲೆ ವಿಮಾನ ಸಿಗದೇ ಸಿಂಗಾಪುರದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಭರವಸೆಯನ್ನು ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೀಡಿದ್ದಾರೆ.
ಈ ವಿಚಾರವಾಗಿ ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯು ತಿಳಿಸಿದೆ. ಭಾರತೀಯ ರಾಯಭಾರ ಕಚೇರಿಯು ಸಿಂಗಾಪುರದಲ್ಲಿರುವ ವಿದ್ಯಾರ್ಥಿಗಳ ಕಾಳಜಿಯನ್ನು ವಹಿಸಿಕೊಳ್ಳಲಿದೆ ಎಂದು ಹೇಳಿದೆ.
ಸಿಂಗಾಪುರದಲ್ಲಿರುವ ವಿದ್ಯಾರ್ಥಿನಿಯೊಂದಿಗೆ ಮುಖ್ಯಮಂತ್ರಿಯವರು ಮಾತನಾಡಿದ್ದು, ಅವಳಿಗೆ ಭಾರತಕ್ಕೆ ಸುರಕ್ಷಿತವಾಗಿ ಕರೆತರುವ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ರಾಜ್ಯದ 50 ವಿದ್ಯಾರ್ಥಿಗಳು ಸಿಂಗಾಪುರದಲ್ಲಿ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸಚಿವ ಉದಯ್ ಸಮಂತ್ ಭರವಸೆ ನೀಡಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ 170ಕ್ಕೆ ಏರಿದ್ದು, ಕರ್ನಾಟಕದಲ್ಲಿ 15 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.