ಬೆಂಗಳೂರು, ಮಾ.19 (DaijiworldNews/PY) : ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಡಿಕೇರಿವರೆಗೆ ಕೊರೊನಾ ಪೀಡಿತ 15ನೇ ವ್ಯಕ್ತಿಯೋರ್ವ ರಾಜಹಂಸ ಬಸ್ಸಿನಲ್ಲಿ ತೆರಳಿದ್ದ ವಿಚಾರ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಈ ವ್ಯಕ್ತಿ ಸೌದಿ ಅರೇಬಿಯಾ ಪ್ರವಾಸದಿಂದ ವಾಪಾಸ್ಸಾಗಿದ್ದು, ಬಳಿಕ ಈತ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾ.16 ಸೋಮವಾರದಂದು ಬೆಳಗ್ಗೆ ಮೈಸೂರಿನ ಸ್ಯಾಟಲೈಟ್ ವಿಮಾನ ನಿಲ್ದಾಣಕ್ಕೆ ಬಸ್ ಮೂಲಕ ಬಂದಿದ್ದಾನೆ. ಅಲ್ಲಿಂದ ಮಡಿಕೇರಿಗೆ ರಾಜಹಂಸ ಬಸ್ಸಿನಲ್ಲಿ ಪ್ರಯಾಣ ಮಾಡಿ ನಂತರ ತನ್ನ ಗ್ರಾಮಕ್ಕೆ ವಾಪಾಸ್ಸಾಗಿದ್ದಾನೆ.
ಟೀ, ಕಾಫಿಗೆ ಬಸ್ ಮೈಸೂರಿನಲ್ಲಿ ನಿಲ್ಲಿಸಿತ್ತು. ಈ ಸಂದರ್ಭ ವ್ಯಕ್ತಿ ಹೋಟೆಲ್ಗೆ ತೆರಳಿ ಕಾಫಿ ಕುಡಿದಿದ್ದಾನೆ. ಅಲ್ಲಿಂದ ಸಂಜೆ ಮನೆಗೆ ವಾಪಾಸ್ಸಾದ ಬಳಿಕ ಸುಸ್ತು, ಜ್ವರದ ಲಕ್ಷಣ ಕಂಡುಬಂದಿದೆ. ಆತನನ್ನು ತಕ್ಷಣವೇ ಮನೆಯವರು ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದರು.
ಈಗ ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿರುವ ಎಲ್ಲಾ ಬಸ್ಗಳಿಗೆ ಫ್ಯೂಮಿಗೇಷನ್ ಮಾಡಲಾಗುತ್ತಿದೆ. ನಿರ್ವಾಹಕ ಹಾಗೂ ಚಾಲಕ ಸೇರಿದಂತೆ ಕೊರೊನಾ ಸೋಂಕಿತ ವ್ಯಕ್ತಿ ಟ್ರಾವೆಲ್ ಮಾಡಿದ ಬಸ್ನ ಮಾಹಿತಿಯನ್ನು ಪತ್ತೆ ಮಾಡಿದ ಸಂದರ್ಭ ಸಾಕಷ್ಟು ಜನರು ಪ್ರಯಾಣಿಸಿದ್ದರು ಎಂಬ ಮಾಹಿತಿ ದೊರೆತಿದೆ. ಹಾಗಾಗಿ ಸೋಂಕು ಲಕ್ಷಣ ಕಂಡು ಬಂದ ತಕ್ಷಣವೇ ಪರೀಕ್ಷೆ ಮಾಡಿಸುವಂತೆ ಸೂಚಿಸಲಾಗಿದೆ.