ನವದೆಹಲಿ, ಮಾ.19 (DaijiworldNews/PY) : ಎನ್ಸಿಸಿ ಪ್ರಮಾಣಪತ್ರವಿದ್ದವರಿಗೆ, ಕೇಂದ್ರ ಸಶಸ್ತ್ರ ಪಡೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆಯಲಿರುವ ನೇರ ನೇಮಕಾತಿಯಲ್ಲಿ ಆದ್ಯತೆ ಸಿಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಎನ್ಸಿಸಿ ಪ್ರಮಾಣಪತ್ರವಿದ್ದವರಿಗೆ ನೇಮಕಾತಿಯ ನೇರ ಪ್ರವೇಶ ಪರೀಕ್ಷೆಯಲ್ಲಿ ಬೋನಸ್ ಅಂಕ ಕೊಡುವುದಾಗಿ ತೀರ್ಮಾನಿಸಲಾಗಿದೆ. ಆ ಮೂಲಕನೇಮಕಾತಿಯಲ್ಲಿ ಆದ್ಯತೆ ಕಲ್ಪಿಸಲಾಗುತ್ತದೆ. ಅದರಂತೆ, ಎನ್ಸಿಸಿಯ 'ಸಿ' ಪ್ರಮಾಣಪತ್ರ ಇರುವವರಿಗೆ ಒಟ್ಟು ಅಂಕಿಗಳಲ್ಲಿ ಶೇ. 5ರಷ್ಟು ಬೋನಸ್ ಅಂಕಗಳು ದೊರೆತರೆ, 'ಬಿ' ಪ್ರಮಾಣಪತ್ರಕ್ಕೆ ಶೇ.3, 'ಎ' ಪ್ರಮಾಣಪತ್ರಕ್ಕೆ ಶೇ.2 ಅಂಕಗಳು ದೊರೆಯಲಿವೆ. ಮುಂದೆ ನಡೆಯಲಿರುವ ಸಿಎಪಿಎಫ್ಎಸ್ ನೇಮಕಾತಿಯಲ್ಲಿ 'ಎ' ಪ್ರಮಾಣಪತ್ರ ಹೊಂದಿರುವವರಿಗೂ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.
ಕೇಂದ್ರ ಸರ್ಕಾರವು, ಎನ್ಸಿಸಿ ಪ್ರಮಾಣಪತ್ರ ಹೊಂದಿರುವವರನ್ನು ಆಯಾ ರಾಜ್ಯಗಳ ಸಶಸ್ತ್ರ ಪೊಲೀಸ್ ಪಡೆಗಳ ನೇರ ನೇಮಕಾತಿಯಲ್ಲಿ ಭಾಗವಹಿಸಲು ಉತ್ತೇಜನ ನೀಡುವಂತೆ ದೇಶದ ವಿವಿಧ ರಾಜ್ಯಗಳಿಗೆ ಸೂಚನೆ ನೀಡಲೂ ತೀರ್ಮಾನಿಸಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಎನ್ಸಿಸಿಯಲ್ಲಿ ಯುವಕರ ಭಾಗವಹಿಸುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ.