ನವದೆಹಲಿ, ಮಾ 19 ( Daijiworld News/MSP): ಹತ್ತು ಹಲವು ಕಾನೂನಿನ ಮಾರ್ಗಗಳನ್ನು ಬಳಸಿ ಗಲ್ಲು ಶಿಕ್ಷೆ ಜಾರಿಯಾಗುವುದನ್ನು ತಡೆಯುವಂತೆ ಮಾಡಿದ್ದ ನಿರ್ಭಯಾ ಹಂತಕರು ಕೊನೆಗೂ ನೇಣಿನ ಕುಣಿಕೆಗೆ ಕೊರಳೊಡ್ಡುವ ಸಮಯ ಸನ್ನಿಹಿತವಾಗಿದೆ. ತಮ್ಮ ಹೀನ ಕೃತ್ಯಕ್ಕೆ ಪಾಪ ಪ್ರಜ್ಞೆಯೂ ಇರದ ನಿರ್ಭಯಾ ಹಂತಕರು, ಗಲ್ಲುಶಿಕ್ಷೆಯಿಂದ ಪಾರಾಗಲು ನಡೆಸಿದ ಪ್ರಯತ್ನಗಳು ಒಂದೆರಡಲ್ಲ.
ಗಲ್ಲುಶಿಕ್ಷೆಗೆ ತಡೆ ನೀಡುವಂತೆ ಕೋರಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸುತ್ತಿದ್ದಂತೆ ಹೊಸ ದಾಳ ಪ್ರಯೋಗಿಸಿದ್ದ ಅಪರಾಧಿ ಮುಕೇಶ್ ಸಿಂಗ್ ನಿರ್ಭಯಾ ಅತ್ಯಾಚಾರ ನಡೆದ ದಿನ ತಾನು ದೆಹಲಿಯಲ್ಲೇ ಇರಲಿಲ್ಲ ಎಂದು ವಾದಿಸಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದ. ಆದರೆ ಅಪರಾಧಿಗಳ ಎಲ್ಲಾ ಆಟವ್ನನ್ನು ನೋಡಿದ್ದ ಸುಪ್ರೀಂ ಕೋರ್ಟ್ ಇಂದು ಅರ್ಜಿಯನ್ನು ಸ್ವೀಕರಿಸದಿರಲು ನಿರ್ಧರಿಸಿದೆ. ಮಾತ್ರವಲ್ಲದೆ ನಿರ್ಭಯಾ ಪ್ರಕರಣದ ಅಪರಾಧಿಗಳು ತಮ್ಮ ಸಿಕ್ಕ ಎಲ್ಲಾ ಕಾನೂನು ಅವಕಾಶಗಳನ್ನು ಬಳಸಿಕೊಂಡಿದ್ದು, ಮತ್ತೆ ಮತ್ತೆ ಹೊಸ ಅರ್ಜಿ ಸಲ್ಲಿಸುವುದರಲ್ಲಿ ಅರ್ಥವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಕೇಶ್ ಸಿಂಗ್ ತಾನು ದೆಹಲಿಯಲ್ಲೇ ಇರಲಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೂಡಲೇ ಮುಕೇಶ್ ಸಿಂಗ್ ಸುಪ್ರೀಂಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದ. ಆದರೆ ಈ ಅರ್ಜಿಯನ್ನು ಸ್ವೀಕರಿಸದಿರಲು ಸುಪ್ರೀಂಕೋರ್ಟ್ ತೀರ್ಮಾನಿಸುವುದರ ಜೊತೆಗೆ ಅಪರಾದಿಗಳೂ ಕಾನೂನಿನ ಎಲ್ಲಾ ಅವಕಾಶ ಬಳಸಿಕೊಂಡಿರುವ ಕಾರಣ ಮುಕೇಶ್ ಸಿಂಗ್ ಅರ್ಜಿಯ ವಿಚಾರಣೆ ಮಾಡುವ ಅಗತ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್ ಖಡಕ್ ಆಗಿ ಹೇಳಿದೆ.
ಈಗಾಗಲೇ ಜಾರಿಯಾಗಿರುವ ಡೆತ್ ವಾರೆಂಟ್ ನಂತೆ ನಾಲ್ವರೂ ಆರೋಪಿಗಳನ್ನು ನಾಳೆ ಅಂದರೆ ಶುಕ್ರವಾರ ಬೆಳಗ್ಗೆ 5 ಗಂಟೆಗೆ ಗಲ್ಲುಶಿಕ್ಷೆಗೆ ಗುರಿ ಪಡಿಸಲೆಂದು ತಿಹಾರ್ ಜೈಲಿನ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ.