ನವದೆಹಲಿ, ಮಾ 19 ( Daijiworld News/MSP): ಕೊರೊನಾ ವೈರಸ್ ಸೋಂಕಿಗೆ ಪಂಜಾಬ್ ನಲ್ಲಿ 70 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಆ ಮೂಲಕ ಕೋವಿಡ್–19ಗೆ ದೇಶದಲ್ಲಿ ಸಾವಿಗೀಡಾದವರ ಸಂಖ್ಯೆ 4 ಕ್ಕೆ ಏರಿದೆ.
ಪಂಜಾಬ್ನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಾವನ್ನಪ್ಪಿದ್ದಾರೆ. ಚಂಡೀಗಢದಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಗುರುವಾರವಷ್ಟೇ ಪಂಜಾಬ್ ಸರ್ಕಾರ ನಿಷೇಧಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಸೋಂಕಿತ ವ್ಯಕ್ತಿ ಪಂಜಾಬ್ನಲ್ಲಿ ಮೃತಪಟ್ಟಿದ್ದಾರೆ.
76 ವರ್ಷದ ಕರ್ನಾಟಕದ ವೃದ್ಧರೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದ್ದರು. ಮಾತ್ರವಲ್ಲ ಇದೇ ಸೋಂಕಿನಿಂದ 64 ವರ್ಷದ ಮಹಾರಾಷ್ಟ್ರ ವ್ಯಕ್ತಿಯೊಬ್ಬರು ಮರಣ ಹೊಂದಿದ್ದರು.