ನವದೆಹಲಿ, ಮಾ.19 (DaijiworldNews/PY) : ಕೊರೊನಾ ವೈರಸ್ ವಿರುದ್ದ ಹೋರಾಡುವ ನಿಟ್ಟಿನಲ್ಲಿ ದೆಹಲಿಯ ವೈದ್ಯರೊಬ್ಬರು ಪ್ರದರ್ಶಿಸಿದ್ದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಕೊರೊನಾ ಸೋಂಕಿತರ ಆರೈಕೆಗಾಗಿ ನಿಯೋಜನೆಗೊಂಡಿರುವ ಡಾ.ಅಮರಿಂದರ್ ಸಿಂಗ್ ಮಾಲ್ಹಿ ಎಂಬ ವೈದ್ಯರು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದೇಶದ ಜನರಿಗೆ ಮನವಿ ಮಾಡುತ್ತಾ, ನಿಮಗಾಗಿ ನಾನು ಕರ್ತವ್ಯದಲ್ಲಿದ್ದೇನೆ. ನಮಗಾಗಿ ನೀವು ಮನೆಯಲ್ಲೇ ಇರಿ ಎನ್ನುವ ಬರಹವಿದ್ದ ಪೋಸ್ಟರ್ ಹಿಡಿದಿದ್ದ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯರ ಈ ಕಾಳಜಿಯನ್ನು ಪ್ರಶಂಸಿಸಿದ್ಧಾರೆ. ಪ್ರಧಾನಿ ಮೋದಿ ಅವರು ಈ ಟ್ವೀಟ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದು, ವೆಲ್ ಸೆಡ್ ಡಾಕ್ಟರ್ ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಜಗತ್ತಿನಾದ್ಯಂತ ಮಾರಕ ವೈರಸ್ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ ವೈದ್ಯ ಸಮೂಹ ಸೇರಿದಂತೆ ಎಲ್ಲರಿಗೂ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಇವರೆಲ್ಲರ ಶ್ರಮವನ್ನು ಬಣ್ಣಿಸಲು ಪದಗಳೇ ಸಾಲುತ್ತಿಲ್ಲ ಎಂದು ಪ್ರಧಾನಿ ಮೋದಿ ಅವರು ವಿಶ್ವ ಸಮುದಾಯ ಆರೋಗ್ಯ ಸಿಬ್ಬಂದಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.