ನವದೆಹಲಿ, ಮಾ 19 (DaijiworldNews/SM): ದೇಶದ 130 ಕೋಟಿ ಜನ ಕೊರೊನಾ ಆತಂಕದಲ್ಲಿದ್ದಾರೆ. ಮುಂಬರುವ ಕೆಲವು ದಿನಗಳನ್ನು ನಾನು ಕೇಳುತ್ತಿದ್ದೇನೆ. ಪ್ರತಿಯೊಬ್ಬರು ವೈರಸ್ ಬಗ್ಗೆ ಜಾಗೃತರಾಗಿರಿ, ವೈರಸ್ ಬಗ್ಗೆ ನಿರ್ಲಕ್ಷ್ಯವಹಿಸದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುವ ನಿರ್ದೇಶನಗಳನ್ನು ಜನತೆ ಪಾಲಿಸಬೇಕು. ಕೊರೊನಾ ನಿಯಂತ್ರಿಸಲು ಜನತೆ ಸರಕಾರಗಳೊಂದಿಗೆ ಸಹಕಾರ ನೀಡಬೇಕು. ಜನತೆ ಸ್ವಸ್ಥರಾಗಿದ್ದಲ್ಲಿ ರಾಷ್ಟ್ರ, ವಿಶ್ವವೇ ಆರೋಗ್ಯವಾಗಿರಲಿದೆ. ಇನ್ನು ಪ್ರತಿ ವ್ಯಕ್ತಿ ಒಬ್ಬರಿಂದ ಮತ್ತೊಬ್ಬರು ಅಂತರವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಇನ್ನು ಮಾರ್ಚ್ 22ರ ರವಿವಾರದಂದು ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ಜನತಾ ಕರ್ಫ್ಯೂ ಆಚರಿಸುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಡೀ ರಾಷ್ಟ್ರದ ಜನತೆ ಮನೆಯಲ್ಲೇ ಉಳಿದುಕೊಂಡು ಕರ್ಫ್ಯೂ ಆಚರಣೆಗೆ ಸಹಕರಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದಾರೆ. ಜನತಾ ಕರ್ಫ್ಯೂ ದಿನದಂದು ದೇಶದ ಜನ ಮನೆಯಿಂದ ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಮಾರ್ಚ್ 22ರ ಸಂಜೆ 5 ಗಂಟೆಗೆ ಸರಿಯಾಗಿ ನಿಮ್ಮ ಮನೆಯ ಬಾಗಿಲು, ಕಿಟಕಿ ಬಳಿ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವರ್ಗಕ್ಕೆ ಧನ್ಯವಾದ ಸಲ್ಲಿಸೋಣ ಎಂದು ಕರೆ ನೀಡಿದರು.