ಬೆಂಗಳೂರು, ಮಾ 19 (DaijiworldNews/SM): ಕಂಚಿನಡ್ಕ ಪದವಿನ ತ್ಯಾಜ್ಯ ಸಂಸ್ಕರಣಾ ಘಟಕದ ವಿವಾದವನ್ನು ಬಂಟ್ವಾಳ ಹಾಗೂ ಮಂಗಳೂರು ಶಾಸಕರು ಸಮನ್ವಯದಿಂದ ಬಗೆಹರಿಸುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಶೂನ್ಯವೇಳೆಯಲ್ಲಿ ಮಂಗಳೂರು ಶಾಸಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ, ನನ್ನ ಕ್ಷೇತ್ರದ ಸಜೀಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವಿಗೆ ಸ್ಥಳೀಯರ ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಂಟ್ವಾಳ ಪುರಸಭೆಯ ತ್ಯಾಜ್ಯವನ್ನು ಸಂಸ್ಕರಿಸಲು ಘಟಕಕ್ಕೆ ಬಂದಾಗ ಸ್ಥಳೀಯರು ವಿರೋಧ ವ್ಯಕ್ತಪಡಿದ್ದಾರೆ. ಅವರನ್ನು ಪೋಲೀಸರು ಬಲವಂತವಾಗಿ ಬಂಧಿಸಿದ್ದಾರೆ. ಮತ್ತು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯರ ವಿಶ್ವಾಸಗಳಿಸದೆ ಅಲ್ಲಿ ಬೆಂಬಲ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು, 2007-08ರಲ್ಲಿ ಈ ಘಟಕ ಪ್ರಾರಂಭವಾಗಿದೆ. ಪುರಸಭೆಯ ಕ್ಷೇತ್ರ ನನ್ನದು, ಕಸ ವಿಲೇವಾರಿ ಮಾಡುವ ಜಾಗ ಶಾಸಕ ಯು.ಟಿ.ಖಾದರ್ ಅವರದು.
ಕಳೆದ 12 ವರ್ಷಗಳಿಂದ ತ್ಯಾಜ್ಯ ವ್ಯಾಜ್ಯಗಳು ನಡೆಯುತ್ತಿದೆ. ಹಾಗಾಗಿ ಈ ಸಮಸ್ಯೆ ನಿವಾರಿಸಲು ಪ್ರತ್ಯೇಕ ಸದನ ಸಮಿತಿ ಮಾಡಿ ಅವರು ಘಟಕದಲ್ಲಿ ತ್ಯಾಜ್ಯ ಸಂಸ್ಕರಿಸಲು ಒಪ್ಪಿಗೆ ನೀಡಿದೆ. ಪರಿಸರ ಇಲಾಖೆಯೂ ಒಪ್ಪಿದೆ. ಪುರಸಭೆಯ ಕಸ ವಿಲೇವಾರಿಗೆ ಬೇರೆ ಜಾಗವಿಲ್ಲ. ಹಾಗಾಗಿ ಉಳ್ಳಾಲ ಶಾಸಕ ಯು.ಟಿ.ಖಾದರ್ ಹಾಗೂ ನಾನು ಕುಳಿತು ಮುಂದಿನ ಅಭಿವೃದ್ಧಿ ಬಗ್ಗೆ ಮಾತನಾಡುವ ಎಂದು ಅವರು ಹೇಳಿದರು.