ನವದೆಹಲಿ, ಮಾ 20 ( Daijiworld News/MSP): ಎಂಟು ವರ್ಷಗಳ ಹಿಂದೆ ಅಂದರೆ 2012ರ ಡಿಸೆಂಬರ್ 16ರಂದು ರಾಷ್ಟ್ರ ರಾಜಧಾನಿಯಲ್ಲಿ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲಿ ಭೀಕರವಾಗಿ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಿದ್ದ ಹಂತಕರು ಕೊನೆಗೂ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾರೆ. ಹೀಗಾಗಿ 8 ವರ್ಷಗಳ ದೀರ್ಘ ಹೋರಾಟದ ಬಳಿಕ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿದ್ದ ‘ನಿರ್ಭಯಾ’ ಆತ್ಮಕ್ಕೆ ಕೊನೆಗೂ ಶಾಂತಿ ದೊರೆತಂತಾಗಿದೆ.
ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುತ್ತಲೇ ದುರುಳರ ಸಂಹಾರವಾಯಿತೆಂದು ದೇಶದಾದ್ಯಂತ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಹತ್ಯಾಚಾರಿಗಳ ಮರಣದಂಡನೆ ಕೇವಲ ನಿರ್ಭಯಾ ಪೋಷಕರಿಗಷ್ಟೇ ತೃಪ್ತಿ ನೀಡಿಲ್ಲ. ಇಡೀ ದೇಶದ ಜನತೆಗೆ ಸಂತಸವನ್ನು ತಂದಿದೆ.
ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಈ ನಾಲ್ವರು ಅಪರಾಧಿಗಳನ್ನು ಬೆಳಿಗ್ಗೆ 5.30 ಗಂಟೆಗೆ ದೆಹಲಿಯ ತಿಹಾರ್ ಜೈಲಿನಲ್ಲಿ ನೇಣಿಗೆ ಏರಿಸಲಾಗಿದೆ.
ಅತ್ತ ಕಡೆ ಅಪರಾಧಿಗಳ ಗಲ್ಲಿಗೇರಿಸುತ್ತಿದ್ದಂತೆ, ನಿರ್ಭಯಾ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ನ್ಯಾಯದಾನ ವಿಳಂಬವಾದರೂ, ನಿರ್ಭಯಾಳಿಗೆ ನ್ಯಾಯ ಸಿಕ್ಕಿದೆ. ಜೊತೆಗೆ ದೇಶಕ್ಕೆ ನ್ಯಾಯ ಸಿಕ್ಕಿದೆ. ಈ ದಿನವನ್ನು ದೇಶದ ಹೆಣ್ಣುಮಕ್ಕಳಿಗೆ ಆರ್ಪಿಸುವುದಾಗಿ ನಿರ್ಭಯಾ ತಾಯಿ ಆಶಾ ದೇವಿ ನೀಡಿದಿದ್ದಾರೆ.