ನವದೆಹಲಿ, ಮಾ 20 ( Daijiworld News/MSP): ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇಂದು ಬೆಳಗ್ಗಿನ ಜಾವ 5.30 ಕ್ಕೆ ಗಲ್ಲಿಗೇರಿಸಲಾಗಿದೆ. ಈ ಮೂಲಕ 7 ವರ್ಷಗಳಷ್ಟು ಹಳೆಯ ಪ್ರಕರಣಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಲಭಿಸಿದೆ.
ನಿರ್ಭಯಾ ಅಪರಾಧಿಗಳನ್ನು ಮರಣದಂಡಣೆಯ ಬಳಿಕ ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಾಯಿ ಪರ ವಾದ ಮಂಡಿಸಿದ್ದ ಅಡ್ವೋಕೇಟ್ ಸೀಮಾ ಕುಷ್ವಾಹ ಸಂತಸ ವ್ಯಕ್ತಪಡಿಸಿದ್ದು, ನಿರ್ಭಯಾಳನ್ನು ಬದುಕಿಸುತ್ತಿದ್ದರೆ ನನಗೆ ತುಂಬಾ ಖುಷಿಯಾಗುತ್ತಿತ್ತು. ಆದರೆ ನಾವು ಆಕೆಯನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂಬ ದುಃಖವಿದೆ.
ನಮ್ಮ ಹೆಣ್ಣು ಮಕ್ಕಳಿಗಾಗಿ ನಾನು ಹೋರಾಡಿದ್ದೇನೆ. ಗಲ್ಲಿಗೇರಿಸಲಾದ ಅಪರಾಧಿಗಳು ನಿರ್ಭಯಾಳ ಇಡೀ ದೇಹವನ್ನು ನಾಶ ಮಾಡಿದ್ದರು. ಯಾವ ರೀತಿ ನಿರ್ಭಯಾಯನ್ನು ಹತ್ಯೆ ಮಾಡಿದ್ದಾರೋ, ಪ್ರಾಣಿಗಳು ಕೂಡ ಆ ರೀತಿ ಮಾಡಲ್ಲ. ಪಾಪಿಗಳಿಗೆ ತಕ್ಕ ಶಿಕ್ಷೆಯಾಗಿದೆ. ಇದರಿಂದ ದೇಶದ ಎಲ್ಲ ಮಹಿಳೆಯರಿಗೆ ಭದ್ರತೆ ದೊರೆಯುವ ಆಶಾಭಾವನೆ ಮೂಡಿದೆ ಎಂದು ಹೇಳಿದ್ದಾರೆ.