ತಿರುವನಂತಪುರ, ಮಾ 20 ( Daijiworld News/MSP): ಮಾರಕ ಕೊರೋನಾ ವೈರಸ್ ತಾಂಡವವಾಡುತ್ತಿರುವ ಸಂಕಟದ ಸಮಯದಲ್ಲಿ ಕೇರಳ ಸರ್ಕಾರ ಜನರ ಸಹಾಯಕ್ಕೆ ಮುಂದಾಗಿದ್ದು ಮತ್ತಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ.
ಕೇರಳ ಸರ್ಕಾರ ಇದಕ್ಕಾಗಿ 20,000 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಜನತೆಗೆ ನೆರವಾಗಲೆಂದು ಬಿಪಿಎಲ್, ಎಪಿಎಲ್ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಒಂದು ತಿಂಗಳ ಕಾಲ ಉಚಿತವಾಗಿ ಪಡಿತರ
ಪೂರೈಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾಹಿತಿ ನೀಡಿದ್ದು, ಒಂದು ತಿಂಗಳ ಆಹಾರಧಾನ್ಯ ಪಡಿತರ ಮೂಲಕ ಉಚಿತವಾಗಿ ನೀಡಲಾಗುವುದು. ವಿವಿಧ ರೀತಿಯ ಪಿಂಚಣಿಗಳನ್ನು ಎರಡು ತಿಂಗಳು ಮೊದಲೇ ಅಂದರೆ ಏಪ್ರಿಲ್ ಹಾಗೂ ಮೇ ತಿಂಗಳ ಪಿಂಚಣಿ ಮಾರ್ಚ್ ನಲ್ಲೇ ನೀಡಲಾಗುವುದು. ಪಿಂಚಣಿ ಪಡೆಯದ ಕುಟುಂಬಗಳಿಗೆ 1000 ರೂಪಾಯಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ 1000 "ಸುಬೀಕ್ಷಾ" ರೆಸ್ಟೋರೆಂಟ್ ಆರಂಭಿಸಿ 20 ರೂ ಬೆಲೆಯಲ್ಲಿ ಊಟ ಪೂರೈಸಲಾಗುವುದು . ಮುಂದಿನ ಮೂರು ತಿಂಗಳು ಬಸ್ ಗಳಿಗೆ ತೆರಿಗೆ ಮನ್ನಾ ಮಾಡಲಾಗುವುದು. ವಿದ್ಯುತ್, ನೀರಿನ ಬಿಲ್ ಪಾವತಿಸಲು ಒಂದು ತಿಂಗಳು ಅವಧಿ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದಲ್ಲದೆ ಕೋವಿಡ್-19 ರ ಅವಧಿಗೆ 500 ಕೋಟಿ ರೂಪಾಯಿ ಆರೋಗ್ಯ ಯೋಜನೆ ಜಾರಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 2000 ಕೋಟಿ ರೂಪಾಯಿ ವಿಶೇಷ ಹೂಡಿಕೆ ಮಾಡಿ ಅರ್ಹರಿಗೆ ಎರಡು ತಿಂಗಳ ಕೂಲಿ ಮತ್ತು ಕುಟುಂಬಶ್ರೀ ಯೋಜನೆಗೆ ಮಾತ್ರವೇ ಸಾಲಸೌಲಭ್ಯಕ್ಕಾಗಿ 2000 ಕೋಟಿ ರೂಪಾಯಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.