ಮಹಾರಾಷ್ಟ್ರ, ಮಾ.20 (DaijiworldNews/PY) : ದೇಶಾದ್ಯಂತ ಕೊರೊನಾ ವೈರಸ್ ಭೀತಿ ವ್ಯಾಪಕವಾಗಿ ಪಸರಿಸಿದ್ದು, ವ್ಯಕ್ತಿಯೋರ್ವ ಸೀನಿದ ಕಾರಣಕ್ಕೆ ಸಾರ್ವಜನಿಕವಾಗಿ ಥಳಿಸಿದ ಘಟನೆ ಕೊಲ್ಹಾಪುರದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಟ್ರಾಫಿಕ್ ಜಾಮ್ ಆದ ಕಾರಣ ವ್ಯಕ್ತಿಯೋರ್ವ ಬೈಕ್ ಅನ್ನು ನಿಲ್ಲಿಸಿದ್ದ. ಈ ಸಂದರ್ಭ ಆತ ಕರವಸ್ತ್ರ ಬಳಸದೇ ಸಾರ್ವಜನಿಕವಾಗಿ ಸೀನಿದ್ದಕ್ಕೆ ಇತರ ವಾಹನಗಳಲಿದ್ದವರು ಬಂದು ಆತನಿಗೆ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಘಟನೆ ನಡೆದ ಸ್ಥಳದಲ್ಲಿ ಕೆಲಸಮಯ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು ಮಾತ್ರವಲ್ಲದೇ, ರಸ್ತೆಯಲ್ಲಿ ಅನೇಕ ವಾಹನಗಳು ನಿಂತಿದ್ದರಿಂದ ಟ್ರಾಫಿಕ್ ಜಾಮ್ಗೂ ಕಾರಣವಾಯಿತು.
ಕೊರೊನಾ ಸೋಂಕು ಪೀಡಿತರ ಸಂಖ್ಯೆ ಮಹಾರಾಷ್ಟ್ರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, 49 ಪ್ರಕರಣಗಳು ವರದಿಯಾಗಿವೆ.
ಕೆಮ್ಮುವುದರಿಂದ, ಸೀನುವುದರಿಂದ, ಸೋಂಕು ಪೀಡಿತ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿದಾಗ ಹಾಗೂ ಉಗುಳುವುದರಿಂದ ಕೊರೊನಾ ಹರಡುತ್ತದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.