ಬೆಂಗಳೂರು, ಮಾ 20 ( Daijiworld News/MSP): ಗಾತ್ರದಲ್ಲಿ ಚಿಕ್ಕದಾದ ಜನರ ಮೆಚ್ಚುಗೆ ಗಳಿಸಿದ ಪಕ್ಷಿಯಿದು, ಸದಾ ಗುಂಪು ಗುಂಪಾಗಿ ತನ್ನ ಸಹಚರರೊಂದಿಗೆ ಎಲ್ಲಿ ನೋಡಿದರೂ ಕಣ್ಣಿಗೆ ಬೀಳುವ, ಯಾವಾಗಲೂ ಒಗ್ಗಟ್ಟಿನಿಂದ ಚೀಂವ್ ಚೀಂವ್ ಸದ್ದು ಮಾಡುತ್ತಾ, ಹೆಚ್ಚಾಗಿ ಜನರ ಮಧ್ಯೆಯೇ ಬದುಕುವ ಪುಟ್ಟ ಪಕ್ಷಿಯೇ ಈ ಗುಬ್ಬಚ್ಚಿ.ಈ ಎಲ್ಲಾ ವಿಶೇಷತೆಯಿಂದ ಆಕರ್ಷಿತವಾದ ಗುಬ್ಬಿ ಇಂದು ಅಳಿವಿನಂಚಿನತ್ತ ಸಾಗುತ್ತಿದೆ. ಇದರ ಇರುವಿಕೆ, ಹಾಗೂ ಗುಬ್ಬಚ್ಚಿಯ ಪ್ರಾಮುಖ್ಯತೆ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಿ ದಿನ ಆಚರಿಸಲಾಗುತ್ತಿದೆ.
ಇಂದು ಗುಬ್ಬಿಗಳು ಕಣ್ಮರೆಯಾಗುತ್ತಿವೆ. ಊರಿನ ಬೀದಿ ಬೀದಿಯಲ್ಲಿ ಗುಂಪು ಗುಂಪಾಗಿ ಚಿಲಿಪಿಲಿ ಸದ್ದು ಮಾಡುತ್ತ, ಜನರೊಂದಿಗೆ ಬೆರೆಯುತ್ತಿದ್ದ ಗುಬ್ಬಚ್ಚಿಯನ್ನು ಫೋಟೋದಲ್ಲಿ ನೋಡುವಂತಹ ದುಸ್ಥಿತಿ ಉಂಟಾಗಿದೆ. ಅತ್ಯಂತ ಸೂಕ್ಷ್ಮ ಸ್ವಭಾವದ ಜೀವಿಯಾಗಿರುವ ಗುಬ್ಬಿ. ಅಕ್ಕಿ, ರಾಗಿ, ಜೋಳ, ಸಣ್ಣ ಪುಟ್ಟ ಗೆದ್ದಲು ಹುಳುಗಳನ್ನು ತಿಂದು ಬದುಕುತ್ತದೆ.
ಇವು ಮನೆಯ ಗೋಡೆಗಳ ಮೇಲೆ ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ. ಗುಬ್ಬಚ್ಚಿ ವರ್ಷಕ್ಕೆ ಅನೇಕ ಬಾರಿ ಮೊಟ್ಟೆಗಳನ್ನಿಡುತ್ತದೆ. ಗುಬ್ಬಿ 3 ರಿಂದ 4 ಮೊಟ್ಟೆಗಳನ್ನಿಟ್ಟು ತನ್ನ ಸಂತಾನೋತ್ಪತ್ತಿ ವೃದ್ಧಿಸುತ್ತದೆ. ಗುಬ್ಬಿಗಳು ಹೆಚ್ಚಾಗಿ ಜಿಗಿಯುತ್ತ, ಹಾರುತ್ತಾ ಇರುತ್ತವೆ. ಕಾರಣ ಇವುಗಳ ಕಾಲು ಅತ್ಯಂತ ತೆಳುವಾಗಿದ್ದು, ತಮ್ಮ ಭಾರ ತಾವು ಹೊರಲಾಗದ ಸ್ಥಿತಿಯಲ್ಲಿರುತ್ತವೆ.ಇತ್ತೀಚಿನ ವರದಿಯ ಪ್ರಕಾರ ಅತ್ಯಂತ ಅಳಿವಿನಂಚಿನಲ್ಲಿರುವ ಪಕ್ಷಿಗಳಲ್ಲಿ ಗುಬ್ಬಿಯೂ ಒಂದು. ಅವು ವಿನಾಶದ ಅಂಚಿನಲ್ಲಿದ್ದು, ಮುಂದಿನ ದಿನಗಳಲ್ಲಿ ಗುಬ್ಬಿ ಕಾಣಸಿಗುವುದು ಅಪರೂಪವಾಗುವ ಸಾಧ್ಯತೆಗಳಿವೆ.
ಗುಬ್ಬಿಗಳು ಈ ನಡುವೆ ಕಣ್ಮರೆಯಾಗಲು ಅನೇಕ ಕಾರಣಗಳಿವೆ. ಅಭಿವೃದ್ಧಿ ನೆಪದಲ್ಲಿ ಗಿಡ ಮರಗಳನ್ನು ಕಡಿಯಲಾಗುತ್ತಿದೆ. ಮರಗಳಿದ್ದ ಜಾಗದಲ್ಲಿ ಬಹುಮಹಡಿಯುಳ್ಳ ಕಟ್ಟಡಗಳು ತಲೆ ಎತ್ತುತ್ತಿವೆ. ಇದರಿಂದ ಗುಬ್ಬಚ್ಚಿಗಳಿಗೆ ಅಷ್ಟು ಎತ್ತರ ಹೋಗಿ, ಗೂಡು ಕಟ್ಟಲು ಕಷ್ಟವಾಗುತ್ತದೆ. ಅಲ್ಲದೇ ಇಂದಿನ ದಿನಮಾನಗಳಲ್ಲಿ ಫೋನ್ ಟವರ್ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಟವರ್ ಕಂಬದಿಂದ ಹೊರಬರುವ ವಿಕಿರಣಗಳಿಗೆ ಗುಬ್ಬಿ ಸಿಲುಕಿ, ನಾಶವಾಗುತ್ತಿವೆ ಎನ್ನಲಾಗುತ್ತಿದೆ. ರೈತರ ಜಮೀನಿನಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದ್ದು, ಹೊಲಗಳಲ್ಲಿ ಗುಬ್ಬಿಗಳಿಗೆ ಆಹಾರವಾಗಿದ್ದ, ಸಣ್ಣ ಪುಟ್ಟ ಹುಳುಗಳು ಕಣ್ಮರೆಯಾಗಿದ್ದು, ಗುಬ್ಬಿಗಳಿಗೆ ಆಹಾರ ದೊರೆಯದಂತಾಗಿದೆ. ಇನ್ನೂ ದವಸ ಧಾನ್ಯಗಳನ್ನು ಬೆಳೆಯುವುದೇ ಕಡಿಮೆಯಾಗಿರುವ ಈ ಕಾಲದಲ್ಲಿ ಅವುಗಳನ್ನು ಚೆಲ್ಲಿ ಪಕ್ಷಿಗಳಿಗೆ ಆಹಾರ ನೀಡುವ ಮನಸ್ಸುಳ್ಳವರ ಸಂಖ್ಯೆ ಕಡಿಮೆಯಾಗುತ್ತಿದೆ. ಗುಬ್ಬಿಗೆ ಆಹಾರದ ಕೊರತೆ ಹೆಚ್ಚಾಗಿ ಅವು ವಿನಾಶದ ಅಂಚಿನತ್ತ ಸಾಗುತ್ತಿವೆ. ಅತ್ಯಂತ ಅಗಾಧವಾಗಿ ಕಾಣಸಿಗುತ್ತಿದ್ದ ಗುಬ್ಬಿ ಇಂದು ಮಾನವನ ಅತಿಯಾದ ಆಧುನೀಕರಣದ ಪ್ರಭಾವದಿಂದ ಕಣ್ಮರೆಯಾಗಿವೆ. ಇಂದು ಬೆರಳೆಣಿಕೆಯಷ್ಟು ಗುಬ್ಬಿಗಳು ಕಾಣುತ್ತಿದ್ದು, ನಾವು ಅವುಗಳ ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ಬಳುವಳಿ ನೀಡಬೇಕಾಗಿದೆ. ಆದ ಕಾರಣ ನಾವು ನಮ್ಮ ಮನೆಯ ಮೇಲೆ ಅಥವಾ ಅಕ್ಕ ಪಕ್ಕದಲ್ಲಿ ಧಾನ್ಯಗಳನ್ನು ಹಾಗೂ ನೀರನ್ನು ನೀಡುವುದರ ಮೂಲಕ ಅವುಗಳ ಆಹಾರ ಕೊರತೆಯನ್ನು ಸ್ವಲ್ಪ ನೀಗಿಸೋಣ ಹಾಗೂ ಗುಬ್ಬಿ ಗೂಡು ಕಟ್ಟಲು ಸ್ಥಳಾವಕಾಶ ಕಲ್ಪಿಸೋಣ. ಗುಬ್ಬಿಗಳ ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋಣ.