ಭೋಪಾಲ್, ಮಾ.20 (DaijiworldNews/PY) : ಶುಕ್ರವಾರ ಮಧ್ಯಪ್ರದೇಶ ರಾಜಕೀಯ ಹೈಡ್ರಾಮಕ್ಕೆ ತೆರೆಬೀಳಲಿದ್ದು, ವಿಶ್ವಾಸಮತ ಸಾಬೀತಿಗೂ ಮೊದಲು ಸಿಎಂ ಕಮಲ್ನಾಥ್ ಅವರು ಪದತ್ಯಾಗ ಮಾಡಲಿದ್ದಾರೆ ಎಂಬ ಸುಳಿವನ್ನು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನೀಡಿದ್ದಾರೆ.
ಶುಕ್ರವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಸಿಎಂ ಕಮಲ್ನಾಥ್ ಅವರು ಮ್ಯಾಜಿಕ್ ನಂಬರ್ ಇಲ್ಲದ ಕಾರಣದಿಂದ ಪದತ್ಯಾಗ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು, "ನಮ್ಮ ಬಳಿ 22 ಶಾಸಕರ ರಾಜೀನಾಮೆಯಿಂದಾಗಿ ಬಹುಮತ ಇಲ್ಲ. ಬಹುಮತ ಸರ್ಕಾರವು ಹಣ ಹಾಗೂ ಅಧಿಕಾರ ಪ್ರಯೋಗದಿಂದ ಅಲ್ಪಮತಕ್ಕೆ ಇಳಿದಿದೆ" ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಕಮಲ್ನಾಥ್ ಅವರು ಶುಕ್ರವಾರ ಸಂಜೆಯೊಳಗೆ ಬಹುಮತ ಸಾಬೀತು ಪಡಿಸದಿದ್ದಲ್ಲಿ ಸರ್ಕಾರ ಪತನವಾಗುವುದು ಖಚಿತ. ದಿಗ್ವಿಜಯ್ ಸಿಂಗ್ ಅವರು ವಿಶ್ವಾಸಮತ ಸಾಬೀತಿಗೂ ಮೊದಲು ತಮ್ಮ ಬಳಿ ಬಹುಮತವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ದಿಗ್ವಿಜಯ್ ಸಿಂಗ್ ಅವರು ಎರಡು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದು, ನಗರದ ಹೊರವಲಯದ ರೆಸಾರ್ಟ್ನಲ್ಲಿ ಉಳಿದುಕೊಂಡಿರುವ ಮಧ್ಯಪ್ರದೇಶದ ಶಾಸಕರ ಭೇಟಿಗೆ ಮುಂದಾಗಿದ್ದರು. ಆದರೆ, ಶಾಸಕರ ಭೇಟಿಗೆ ಪೊಲೀಸರು ಅವಕಾಶ ನೀಡಲಿಲ್ಲ.