ಬೆಂಗಳೂರು, ಮಾ 20 ( Daijiworld News/MSP): ಮಾರಕ ಕೊರೋನಾ ವೈರಸ್ ತಾಂಡವವಾಡುತ್ತಿರುವ ಸಂಕಟದ ಸಮಯದಲ್ಲಿ ಕೇರಳ ಸರ್ಕಾರ ತಮ್ಮ ರಾಜ್ಯದ ಜನತೆಯ ಸಹಾಯಕ್ಕೆ ಮುಂದಾಗಿದ್ದು ಹಲವಾರು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಇದೇ ಮಾದರಿಯನ್ನು ಕರ್ನಾಟಕವೂ ಅನುಸರಿಸಿಲಿ ಎಂದು ರಾಜ್ಯ ಸರ್ಕಾವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಬಡವರು, ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು ಕೊರೊನಾದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ಪಾಸಿಟಿವ್ 15 ಪ್ರಕರಣಗಳು ವರದಿಯಾಗಿದೆ. ಕೇರಳಕ್ಕಿಂತ ಕರ್ನಾಟವೇನು ಭಿನ್ನವಾಗಿಲ್ಲ ಈ ಹಿನ್ನಲೆಯಲ್ಲಿ ಸರ್ಕಾರ ತಕ್ಷಣ ವಿಶೇಷ ಅನುದಾನ ಘೋಷಣೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕೊರೊನಾ ವೈರಸ್ ನಿಂದ ನಿಂದ ಹದಗೆಟ್ಟಿರುವ ಆರ್ಥಿಕತೆಗೆ ಚೈತನ್ಯ ನೀಡಲು ಕೇರಳ ಅಲ್ಲಿನ ಜನರಿಗೆ ₹20,000 ಕೋಟಿ ಪ್ಯಾಕೇಜ್ ಘೋಷಿಸಿದೆ. ಇದರಲ್ಲಿ, ಆರೋಗ್ಯ ಸೇವೆ, ಸಾಲಕ್ಕೆ ನೆರವು, ಮಾಸಾಶನ, MGNREGSಗೆ ಅನುದಾನ, ಉಚಿತ ದಿನಸಿ, ಕಡಿಮೆ ದರದಲ್ಲಿ ಊಟ, ಬಾಕಿ ಮರುಪಾವತಿ, ಪರಿಹಾರ ಮೊತ್ತಗಳು ಸೇರಿವೆ. ಕೇರಳದ ಈ ನಡೆ ನಮಗೆ ಮಾದರಿಯಾಗಬಾರದೇಕೆ? ಎಂದು ಪ್ರಶ್ನಿಸಿದ್ದಾರೆ.
ಕೇರಳದಲ್ಲಿ 26 ಕೊರೊನಾ ಪ್ರಕರಣ ವರದಿಯಾಗಿದ್ದರೆ ಕರ್ನಾಟಕದಲ್ಲಿ 15 ಪ್ರಕರಣಗಳು ವರದಿಯಾಗಿವೆ. ಅಂದರೆ ರಾಜ್ಯದಲ್ಲಿ ಮಹಾಮಾರಿಯ ಬಗೆಗಿನ ಆತಂಕ, ಭೀತಿ ಕೇರಳಕ್ಕಿಂತಲೂ ಭಿನ್ನವೇನಲ್ಲ.ಇದು ರಾಜ್ಯದ ಆರ್ಥಿಕತೆಗೂ ಪೆಟ್ಟು ನೀಡುತ್ತಿದೆ. ಸದ್ಯ ಬಡ ವರ್ಗದ ಮೇಲೆ ಇದು ನೇರ ಪರಿಣಾಮ ಬೀರುತ್ತಿದೆ.ರಾಜ್ಯವೂ ಕೇರಳ ಮಾದರಿಯ ನಿರ್ಧಾರಕ್ಕೆ ಬರಬೇಕು.
ಆರೋಗ್ಯ ಸೇವೆಗೆ ಹೆಚ್ಚಿನ ಹಣ, ಬ್ಯಾಂಕ್ ಸಾಲಗಳ ತಿಂಗಳ ಕಂತು ಮುಂದೂಡಿಕೆ, ಬಡ್ಡಿ ಮನ್ನ, ಮಾಸಾಶನ, MGNREGSಗೆ ಅನುದಾನ, ಪರಿಹಾರ ಘೋಷಣೆಯಂಥ ನಿರ್ಧಾರಗಳನ್ನು ನಾವೂ ಕೈಗೊಳ್ಳಬೇಕು. ಆರ್ಥಿಕ ದುರ್ಬಲರಿಗೆ ನೆರವಾಗುವ ಮೂಲಕ ಆರ್ಥಿಕತೆಗೆ ಚೈತನ್ಯ ತುಂಬಬೇಕು. ಜೊತೆಗೆ ಕೊರೋನಾ ವೈರಸ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು.
ಕೊರೊನಾ ವೈರಸ್ನಿಂದ ಎದುರಾದ ನಿರ್ಬಂಧಗಳಿಂದಾಗಿ ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು ಹೆಚ್ಚು ಬಾಧಿತರಾಗಿದ್ದಾರೆ. 2 ತಿಂಗಳ ಅವರ ಬದುಕಿಗೆ ನೆರವಾಗುವಂತೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಆಟೋ, ಕ್ಯಾಬ್ ಚಾಲಕರ ಬ್ಯಾಂಕ್ ಲೋನ್ ಕಂತು ಪಾವತಿಗೆ 2 ತಿಂಗಳ ವಿನಾಯಿತಿ ಕಲ್ಪಿಸಬೇಕು. ಈ ಮೂಲಕ ಸರ್ಕಾರ ಬಡವರ ಪರ ನಿಲುವು ತಾಳಬೇಕು ಎಂದು ಸಲಹೆ ನೀಡಿದ್ದಾರೆ.