ನವದೆಹಲಿ , ಮಾ.20 (DaijiworldNews/PY) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳು ಶುಕ್ರವಾರ ಬೆಳಗ್ಗೆ 5.30ಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರುವ ಮುನ್ನ ಅವರು ಕೊನೆಯ ಊಟ, ನಿದ್ದೆ ಹಾಗೂ ಸ್ನಾನ ಮಾಡಲು ನಿರಾಕರಿಸಿದ್ದರು, ಕೊನೆಯ ಕೆಲವು ಗಂಟೆಗಳನ್ನು ಜೈಲ್ 3ರ ಪ್ರತ್ಯೇಕ ಸೆಲ್ನಲ್ಲಿ ಅಪರಾಧಿಗಳು ಏಕಾಂತವಾಗಿ ಕಳೆದಿದ್ದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಅಪರಾಧಿಗಳಾದ ಅಕ್ಷಯ್ ಕುಮಾರ್, ಪವನ್ ಗುಪ್ತಾ, ವಿನಯ್ ಶರ್ಮಾ, ಮುಕೇಶ್ ಸಿಂಗ್ ಇವರನ್ನು ಶುಕ್ರವಾರ ಬೆಳಗ್ಗೆ 5.30ಕ್ಕೆ ನೇಣುಗಂಬಕ್ಕೆ ಏರಿಸಲಾಯಿತು. ದೆಹಲಿಯಲ್ಲಿ 2012ರಲ್ಲಿ ಚಲಿಸುವ ಬಸ್ನಲ್ಲಿ ಯುವ ವೈದ್ಯಕೀಯ ವಿದ್ಯಾರ್ಥಿಯನ್ನು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಹತ್ಯೆಗೈದ ಪ್ರಕರಣದಲ್ಲಿ ಈ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ಅಪರಾಧಿಗಳ ಅಂತಿಮ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಎರಡು ಗಂಟೆಗಳ ನಂತರ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ನೀಡಲಾಯಿತು.
ತಮ್ಮ ಕೊನೆಯ ಆಸೆಯನ್ನು ಅಪರಾಧಿಗಳು ಅಧಿಕಾರಿಗಳ ಬಳಿ ಹೇಳಿರಲಿಲ್ಲ. ಬೆಳಗ್ಗೆ 3.30ಕ್ಕೆ ಅಪರಾಧಿಗಳು ಎದ್ದಾಗ ನ್ಯಾಯಾಲಯದಲ್ಲಿ ಅವರ ಹಾದಿಯು ಅಂತಿಮ ಹಂತಕ್ಕೆ ತಲುಪಿರುವುದು ಮನವರಿಕೆಯಾಯಿತು. ಬೆಳಗ್ಗಿನ ತಿಂಡಿ, ಕೊನೆಯ ಊಟ ಸೇವಿಸಲು ನಾಲ್ವರು ಆರೋಪಿಗಳು ನಿರಾಕರಿಸಿದರು. ಸ್ನಾನ ಮಾಡುವಂತೆ ಕೇಳಿಕೊಂಡರೂ ಅದಕ್ಕೂ ಅವರು ನಿರಾಕರಿಸಿದ್ದಾರೆ ಎಂದು ಜೈಲು ಅಧಿಕಾರಿಗಳು ಹೇಳಿದ್ಧಾರೆ.
ಇಡೀ ಜೈಲು ಕಳೆದ ರಾತ್ರಿಯಿಂದ ಲಾಕ್ ಆಗಿತ್ತು. ಗಲ್ಲುಶಿಕ್ಷೆಗೆ ಕೇವಲ ಐವರು ಮಾತ್ರ ಸಾಕ್ಷಿಯಾಗಿದ್ದರು. ಡೆಪ್ಯುಟಿ ಸೂಪರಿಂಟೆಂಡೆಂಟ್, ಸ್ಥಾನೀಯ ವೈದ್ಯಕೀಯ ಅಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್, ಜೈಲು ಸೂಪರಿಂಟೆಂಡೆಂಟ್ ಹಾಗೂ ಓರ್ವ ಜೈಲು ಸಿಬ್ಬಂದಿ ಸದಸ್ಯರಿದ್ದರು.
ಪವನ್ ಜಲ್ಲದ್ ಅವರು ಅಪರಾಧಿಗಳನ್ನು ಗಲ್ಲಿಗೇರಿಸಿದರು. ಮೂವರು ಅಪರಾಧಿಗಳಾದ ವಿನಯ್, ಮುಕೇಶ್ ಹಾಗೂ ಪವನ್ ತಿಹಾರ್ ಜೈಲಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದ್ದರು. ಜೈಲಿನಲ್ಲಿದ್ದ ಸಮಯದಲ್ಲಿ ಅವರು ಕೆಲಸ ಮಾಡಿ ಗಳಿಸಿದ್ದ ಹಣವನ್ನು ಆ ಮೂವರ ಕುಟುಂಬದ ಸದಸ್ಯರಿಗೆ ನೀಡಲಾಗಿದೆ. ಅಪರಾಧಿಗಳಿಗೆ ಸೇರಿದ ವಸ್ತುಗಳನ್ನು ಅವರ ಕುಟುಂಬಕ್ಕೆ ಕೊಡಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಅಪರಾಧಿ ವಿನಯ್ ನೇಣುಗಂಬಕ್ಕೇರುವ ಮುನ್ನ ತನ್ನನ್ನು ಕ್ಷಮಿಸುವಂತೆ ಜೈಲು ಅಧಿಕಾರಿಗಳ ಬಳಿ ಕೋರಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಕಳೆದ ತಿಂಗಳು ಜೈಲು ಕೊಠಡಿಯ ಗೋಡೆಗೆ ವಿನಯ್ ತನ್ನ ತಲೆಯನ್ನು ಜಜ್ಜಿಕೊಂಡು ಸ್ವತಃ ಗಾಯ ಮಾಡಿಕೊಳ್ಳಲು ಪ್ರಯತ್ನಿಸಿದ್ದ.
ನೇಣುಗಂಬಕ್ಕೇರಿಸಿದ ನಂತರ ವೈದ್ಯರು ನಾಲ್ವರು ಅಪರಾಧಿಗಳು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ ನಂತರ ದೆಹಲಿ ಜೈಲಿನ ನಿಯಮದ ಪ್ರಕಾರ ಅಪರಾಧಿಗಳ ಮೃತದೇಹಗಳನ್ನು 30 ನಿಮಿಷಗಳ ಕಾಲ ಗಲ್ಲಿಗೇರಿಸಿದ ಸ್ಥಿತಿಯಲ್ಲಿ ಇಡಲಾಗಿತ್ತು. ನಂತರ ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಯಿತು. ಐವರು ಸದಸ್ಯರ ಸಮಿತಿಯು ಪೋಸ್ಟ್ಮಾರ್ಟಂ ಮಾಡಿದ ನಂತರ ಅವರವರ ಕುಂಟುಂಬಗಳಿಗೆ ಅಪರಾಧಿಗಳ ಮೃತದೇಹವನ್ನು ಬಿಟ್ಟುಕೊಡಲಾಯಿತು.