ನವದೆಹಲಿ, ಮಾ 20 ( Daijiworld News/MSP): ರಾಜ್ಯಸಭೆಯಲ್ಲಿ ಬುಧವಾರ ಭಾರತೀಯ ವೈದ್ಯಕೀಯ ಪರಂಪರೆ, ಯೋಗ , ಗೋಮೂತ್ರವನ್ನು ಶ್ಲಾಘಿಸಿದ ಕಾಂಗ್ರೆಸ್ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಸ್ವಪಕ್ಷೀಯರಿಗೆ ಆಶ್ಚರ್ಯ ಮೂಡಿಸಿದರು.
ಒಮ್ಮೆ ಮೀರತ್ ಸಮೀಪದ ಆಶ್ರಮಕ್ಕೆ ಹೋಗಿದ್ದ ವೇಳೆ ವ್ಯಕ್ತಿಯೊಬ್ಬರು ಗೋಮೂತ್ರ ಕುಡಿದು ಕ್ಯಾನ್ಸರ್ ಗುಣಪಡಿಸಿಕೊಂಡ ಕಥೆಯನ್ನೂ ಹೇಳಿಕೊಂಡರು. ಮಾತ್ರವಲ್ಲದೆ ತಾನು ಗೋಮೂತ್ರದ ಕುರಿತು ಮಾತನಾಡಿದಾಗಲೆಲ್ಲಾ ನನ್ನ ಗೆಳೆಯ ಜೈರಾಂ ರಮೇಶ್ ನನ್ನ ಕಾಲೆಳೆಯುತ್ತಾರೆ ಎಂದರು. ಇದೇ ವೇಳೆ ಭಾರತೀಯ ವೈದ್ಯಕೀಯ ಪದ್ದತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಭಾರತೀಯ ವೈದ್ಯಕೀಯ ವ್ಯವಸ್ಥೆ ಉತ್ತಮ ಗುಣಗಳನ್ನು ಹೊಂದಿದೆ. ನನಗೆ ಮೊಣಕಾಲಿನ ತೀವ್ರ ನೋವು ಬಾಧಿಸಿದಾಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ಶಸ್ತ್ರಚಿಕಿತ್ಸೆ ಬದಲು ನಾನು ವಜ್ರಾಸನ, ಯೋಗಭ್ಯಾಸ ಮಾಡಲು ಪ್ರಾರಂಭಿಸಿದ್ದೆ. ಇದರ ಪರಿಣಾಮ ಈಗ ನಾನು ಕುಸ್ತಿ ಮಾಡುವಷ್ಟು ಸಮರ್ಥನಾಗಿದ್ದೇನೆ ಎಂದರು. ದಿವಂಗತ ಮಾಜಿ ಪ್ರಧಾನಿ ವಾಜಪೇಯಿ ಅವರು ಮೊಣಕಾಸಿನ ಶಸ್ತ್ರಚಿಕಿತ್ಸೆ ತಿಳಿದಿದ್ದರೆ ಅವರ ಬಳಿಗೆ ಹೋಗಿ ವಜ್ರಾಸನ ಆರಂಭಿಸುವಂತೆ ಕೇಳಿಕೊಳ್ಳುತ್ತಿದ್ದೆ. ಇದರಿಂದ ಅವರು ಖಂಡಿತವಾಗಿ ಗುಣಮುಖರಾಗು ತ್ತಿದ್ದರು ಎಂದು ಹೇಳಿದರು.
ಅಮೆರಿಕದಲ್ಲಿ ಸುಮಾರು 104 ವರ್ಷ ವಯಸ್ಸಿನ ವ್ಯಕ್ತಿಯನ್ನು ಮಾತನಾಡಿಸಿದೆ. ಅವರು ಯುವಕರನ್ನು ನಾಚಿಸುವಂತೆ ಓಡುತ್ತಾರೆ. ಆಗ ಅವರು " ಯೋಗ ನಮ್ಮ ಸಂಪತ್ತು. ನೀವು ಯೋಗವನ್ನು ಅಭ್ಯಾಸ ಮಾಡಿದರೆ, ನಮ್ಮ ಆರೋಗ್ಯದ ಬಜೆಟ್ ವೆಚ್ಚವನ್ನು ಶೇ. 50ರಷ್ಟು ಕಡಿಮೆ ಮಾಡಬಹುದು. ಇದು ಜೀವನ ವಿಧಾನ. ಭಾರತೀಯ ಔಷಧ ಪದ್ಧತಿ ವೈದ್ಯರ ಬಳಿಗೆ ಹೋಗುವ ಮೊದಲೇ ಸಾಕಷ್ಟು ಪರಿಹಾರ ನೀಡುತ್ತದೆ ಎಂದರು.
ಸರ್ಕಾರ ಮಂಡಿಸಿದ ಮಸೂದೆಗಳನ್ನು ಬೆಂಬಲಿಸಿದರೂ ಯೋಗ, ಪ್ರಕೃತಿ ಚಿಕಿತ್ಸೆಯನ್ನು ಕೈಬಿಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.