ತುಮಕೂರು, ಮಾ.20 (DaijiworldNews/PY) : "ರಾಜ್ಯದ ಜನರು ಕೊರೊನಾ ಭೀತಿಯಿಂದ ತತ್ತರಿಸಿದ್ದು, ಜನರು ವ್ಯಾಪಾರ, ವ್ಯವಹಾರವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ಬ್ಯಾಂಕ್ ಗ್ರಾಹಕರ ಸಾಲದ ಮೇಲಿನ ಒಂದು ತಿಂಗಳ ಬಡ್ಡಿ ಮನ್ನಾ ಮಾಡಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಭೀತಿಯಿಂದ ಕರ್ನಾಟಕ ಲಾಕ್ ಡೌನ್ ಆದ ಹಿನ್ನಲೆ ಸಾರ್ವಜನಿಕರು ಈಗಾಗಲೇ ಹಣವಿಲ್ಲದೇ ಪರದಾಡುತ್ತಿದ್ದಾರೆ. ಹಾಗಾಗಿ ಒಂದು ತಿಂಗಳ ಸಾಲ ಮನ್ನಾವನ್ನು ಕೇಂದ್ರ ರಾಜ್ಯ ಸರ್ಕಾರಗಳು ಮಾಡಬೇಕು. ಸಾಲದ ಕಂತು ಪಾವತಿಯನ್ನು ಮುಂದೂಡಬೇಕು" ಎಂದು ಹೇಳಿದ್ದಾರೆ.
"ಜನರು ಕೊರೊನಾ ಭೀತಿಯಿಂದ ಆತಂಕಕ್ಕೊಳಗಾಗಿದ್ದು, ಇಂತಹ ಸಮಯದಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ. ಸರ್ಕಾರದೊಂದಿಗೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೈಜೋಡಿಸುತ್ತೇನೆ" ಎಂದು ತಿಳಿಸಿದರು.