ಬೆಂಗಳೂರು, ಮಾ.20 (DaijiworldNews/PY) : "ಬೆಂಗಳೂರಿನಲ್ಲಿ 13 ಜನ, ಕಲಬುರ್ಗಿಯಲ್ಲಿ 3 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಮಡಿಕೇರಿಯಲ್ಲಿ ಒಬ್ಬರಿಗೆ ಸೋಂಕು ತಾಗಿದೆ. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದ ಒಟ್ಟು 5 ಪಾಸಿಟಿವ್ ಬಂದ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಇಬ್ಬರು ಶುಕ್ರವಾರ ಡಿಸ್ಚಾರ್ಜ್ ಆಗುತ್ತಿದ್ದಾರೆ" ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಇದುವರೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 86,231 ಜನರ ತಪಾಸಣೆ ಮಾಡಲಾಗಿದೆ. 30,606 ಜನರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿದೆ. ಕಾರವಾರ ಮತ್ತು ಮಂಗಳೂರು ಬಂದರುಗಳಲ್ಲಿ 5,695 ಜನ ತಪಾಸಣೆ ನಡೆಸಲಾಗಿದೆ. ಕರ್ನಾಟಕದಲ್ಲಿ ಈಗ ಒಟ್ಟು 15 ಮಂದಿ ಕೊರೊನಾ ಸೋಂಕಿತರು ಇದ್ದಾರೆ" ಎಂದು ತಿಳಿಸಿದ್ದಾರೆ.
"ಇಲ್ಲಿಯವರೆಗೆ ಒಟ್ಟು 1143 ಜನರ ರಕ್ತ ಹಾಗೂ ಕಫ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 915 ಜನರ ವರದಿ ಬಂದಿದ್ದು ಎಲ್ಲವೂ ನೆಗೆಟಿವ್ ಬಂದಿದೆ. ಉಳಿದಂತ ಪರೀಕ್ಷಾ ವರದಿಗಳು ಬರಬೇಕಿದೆ. ಹೋಮ್ ಕ್ವಾರಂಟೈನ್ನಲ್ಲಿ ಸುಮಾರು 2280 ಜನರನ್ನು ಇಡಲಾಗಿದೆ. ಹಾಸ್ಪಿಟಲ್ ಕ್ವಾರಂಟೈನ್ನಲ್ಲಿ ಸುಮಾರು 97 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಹೇಳಿದರು.
"ಕೊರೊನಾ ವೈರಸ್ ಭಯಾನಕ ಖಾಯಿಲೆ ಅಲ್ಲ. ಈ ಬಗ್ಗೆ ಯಾರೂ ಆತಂಕ ಪಡುವುದು ಬೇಡ. ಗುರುವಾರ ಒಂದೇ ದಿನ ಸುಮಾರು 3000 ಜನ ಮತ್ತೆ ತಾವಾಗಿಯೇ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದಾರೆ" ಎಂದು ತಿಳಿಸಿದರು.
"ಮಾ.22ರಂದು ಪ್ರಧಾನಿ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಆ ದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಕೂಡಾ ಹೊರಗೆ ಬಾರದ ರೀತಿಯಲ್ಲಿ ಪ್ರಧಾನಿ ಮೋದಿ ಅವರು ಸೂಚನೆ ನೀಡಿದ್ದಾರೆ. ನಾವೆಲ್ಲರೂ ಪ್ರಧಾನಿ ಮೋದಿ ಅವರ ಕರೆಗೆ ಒಗ್ಗೂಡಿ ಕೈಜೋಡಿಸಿ ಸ್ಪಂದಿಸೋಣ. ಈಗಾಗಲೇ ಸಿನಿಮಾ ಮಂದಿರ, ಮಾಲ್, ಸಾರ್ವಜನಿಕ ಸ್ಥಳಗಳನ್ನು ರಾಜ್ಯ ಸರ್ಕಾರ 15 ದಿನ ನಿರ್ಬಂಧಿಸಿದೆ. ರಾಜ್ಯದ ಜನತೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಸರ್ಕಾರ ಜನತೆಯ ಸಹಕಾರ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ. ರಾಜ್ಯದ ಜನತೆ ಭಯಬೀಳುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ. ನಮ್ಮ ಸರ್ಕಾರ, ಮುಖ್ಯಮಂತ್ರಿಗಳು ಇದ್ದಾರೆ" ಎಂದು ಹೇಳಿದರು.