ನವದೆಹಲಿ, ಮಾ.20 (DaijiworldNews/PY) : ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಶುಕ್ರವಾರ ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲಾಯಿತು. ಏಳು ವರ್ಷಗಳ ನಂತರ ಸಿಕ್ಕ ಸಜೆಗೆ ದೇಶವೇ ಹರ್ಷ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮೂಲ ಹಂಚಿಕೊಂಡಿದ್ದು, "ನ್ಯಾಯ ಮೇಲುಗೈ ಸಾಧಿಸಿದೆ. ಮಹಿಳಾ ಸುರಕ್ಷತೆ ಹಾಗೂ ಘನತೆಯನ್ನು ಕಾಪಾಡುವುದು ಅತ್ಯಂತ ಅವಶ್ಯಕ. ಪ್ರತಿಯೊಂದು ಕ್ಷೇತ್ರದಲ್ಲೂ ನಾರಿ ಶಕ್ತಿ ಉತ್ತಮ ಸಾಧನೆ ಮಾಡಿದೆ. ನಾವು ಮಹಿಳಾ ಸಬಲೀಕರಣದ ಮೇಲೆ ಕೇಂದ್ರೀಕರಿಸುವ ರಾಷ್ಟ್ರವನ್ನು ನಿರ್ಮಿಸಬೇಕು. ಅಲ್ಲಿ ಅವಕಾಶಗಳಿಗೆ ಹಾಗೂ ಸಮಾನತೆಗೆ ಪ್ರಾಶಸ್ತ್ಯ ನೀಡಬೇಕು" ಎಂದು ತಿಳಿಸಿದ್ದಾರೆ.
2012ರ ಡಿಸೆಂಬರ್ 16ರಂದು ನಾಲ್ವರು ಅಪರಾಧಿಗಳು ಅತ್ಯಾಚಾರಗೈದು ಹತ್ಯೆ ಮಾಡಿದ್ದರು. ನಿರ್ಭಯ ಸಾವಿಗೆ ಸತತ 7 ವರ್ಷಗಳ ನಂತರ ನ್ಯಾಯ ದೊರೆತಂತಾಗಿದೆ.
ಶುಕ್ರವಾರ ಮುಂಜಾನೆ ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳನ್ನು ನೇಣುಗಂಬಕ್ಕೇರಿಸಲಾಯಿತು. ಯಾವುದೇ ಅಂತಿಮ ಇಚ್ಛೆಯನ್ನು ನಿರ್ಭಯಾ ಅಪರಾಧಿಗಳು ವ್ಯಕ್ತಪಡಿಸಿಲ್ಲ. ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಮೊದಲು ಮಾಜಿಸ್ಟ್ರೇಟ್ ಮಾತನಾಡಿಸಿದ್ದರು. ಬಳಿಕ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು.