ಬೆಂಗಳೂರು, ಮಾ 20 ( Daijiworld News/MSP): ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಸರ್ಕಾರದ ಸೂಚನೆಯಂತೆ ಸಿಬಿಎಸ್ ಇ ಮತ್ತು ಐಸಿಎಸ್ಇ ಪರೀಕ್ಷೆಗಳು ಮುಂದೂಡಲಾಗಿದ್ದು ಹೀಗಾಗಿ ಕರ್ನಾಟಕದಲ್ಲೂ ಪರೀಕ್ಷೆ ಮುಂದೂಡಬಹುದೇ ಎಂಬ ಆತಂಕದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕಾಡತೊಡಗಿದೆ. ಕೊರೊನಾದಿಂದ ಉಂಟಾದ ಪರಿಸ್ಥಿತಿ ಹೀಗೆ ಮುಂದುವರಿದರೆ 10ನೇ ತರಗತಿ ಪರೀಕ್ಷೆಗಳು ಮುಂದೂಡಬಹುದೇ ಎಂಬ ಗೊಂದಲ ಎದುರಾಗಿದೆ.
ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ 'ಸಧ್ಯ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮುಂದೂಡುವ ಯಾವುದೇ ಚಿಂತನೆ ಇಲ್ಲ' ಎಂದಿದ್ದಾರೆ.
'ಕಳೆದ ರಾತ್ರಿ ತಾವು ರಾಜಾಜಿನಗರ ಕ್ಷೇತ್ರದಲ್ಲಿ 190ಕ್ಕೂ ಹೆಚ್ಚು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅವರ ಅಭಿಪ್ರಾಯ ಸಂಗ್ರಹಿಸಿದ್ದು, ಯಾವುದೇ ವಿದ್ಯಾರ್ಥಿ ಪರೀಕ್ಷೆ ಮುಂದೂಡುವ ಬಗ್ಗೆ ಇಚ್ಚೆ ವ್ಯಕ್ತಪಡಿಸಿಲ್ಲ. ನಿಗದಿ ಪಡಿಸಿದಂತೆ ಮಾರ್ಚ್ 27ರಿಂದಲೇ ಪರೀಕ್ಷೆಗಳು ಆಗಬೇಕು' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ. ಆದರೂ ಶಿಕ್ಷಣ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಸೋಮವಾರದಂದು ಸರ್ಕಾರದ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಹಿಂದೆ ನಿಗದಿಯಾಗಿರುವಂತೆ ಮಾರ್ಚ್ 27 ರಂದು ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಬೇಕಿದೆ. ಅದಾಗ್ಯೂ ಕೊರೊನಾದಿಂದ ಮತ್ತಷ್ಟು ಭೀಕರತೆ ಉಂಟಾದರೆ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರ್ಕಾರ ಮಾ.23 ರ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.