ಬೆಂಗಳೂರು, ಮಾ.20 (DaijiworldNews/PY) : "ಕೊರೊನಾ ವೈರಸ್ ಅನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಸಂಕಲ್ಪ ಮತ್ತು ಸಂಯಮದಿಂದ ಎದುರಿಸಬೇಕು ಎನ್ನುವ ಪ್ರಧಾನಿ ಮೋದಿ ಅವರ ಮಾತು ಪಾಲನೆಗೆ ಯೋಗ್ಯವಾಗಿದ್ದು, ಪ್ರಧಾನಿ ಮೋದಿ ಅವರು ಮಾ.22 ಭಾನುವಾರದಂದು ಕರೆ ನೀಡಿರುವ ಜನತಾ ಕರ್ಫ್ಯೂವನ್ನು ಬೆಂಬಲಿಸುವ ಮುಖಾಂತರ ಕರ್ತವ್ಯವನ್ನು ಪಾಲಿಸೋಣ" ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಈ ವಿಚಾರವಾಗಿ ಅವರು ಟ್ವೀಟ್ ಕೂಡಾ ಮಾಡಿದ್ದು, ಪತ್ರಿಕಾ ಪ್ರಕಟಣೆಯ ಮೂಲಕ ಜನತಾ ಕರ್ಫ್ಯೂವನ್ನು ಬೆಂಬಲಿಸೋಣ ಎಂದು ಶುಕ್ರವಾರ ತಿಳಿಸಿದ್ದಾರೆ.
"ಗುರುವಾರ ದೇಶದ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಅದರಲ್ಲಿ ಅವರು ನೀಡಿದ ಕರೆ ಆಚರಣೆ ಯೋಗ್ಯವೂ ಹಾಗೂ ಸಮಯೋಚಿತವೂ ಆಗಿದೆ. ಮಾರಣಾಂತಿಕ ಕೊರೊನಾ ವೈರಸ್ಗೆ ಯಾವುದೇ ಔಷಧಿಗಳು ಇಲ್ಲದಿರುವಾಗ ಸ್ವಯಂ ಸಂಕಲ್ಪ ಹಾಗೂ ಸಂಯಮದಿಂದ ಪ್ರತಿಯೊಬ್ಬ ಪ್ರಜೆಯೂ ಎದುರಿಸಬೇಕು ಎಂಬ ಪ್ರಧಾನಿ ಮೋದಿ ಅವರ ಕರೆ ಪಾಲನೆಯೋಗ್ಯವಾಗಿದೆ" ಎಂದರು.
"10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ವೃದ್ದರು ಕಡ್ಡಾಯವಾಗಿ ಮನೆಯಿಂದ ಹೊರಬರಬಾರದು ಎಂಬ ಪ್ರಧಾನಿ ಮೋದಿ ಅವರ ವಿನಂತಿಯ ಹಿಂದಿರುವ ಕಾಳಜಿಯನ್ನು ನಾವು ತಿಳಿದುಕೊಳ್ಳಬೇಕು. ಹಾಗಾಗಿ ಮಾ.22ರಂದು ಜನತಾ ಕರ್ಫ್ಯೂವನ್ನು ನಾವು ಪಾಲಿಸೋಣ. ಅಲ್ಲದೇ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಪ್ಯಾರಾಮೆಡಿಕಲ್ ಸಿಬ್ಬಂದಿಗಳಿಗೂ ಹಾಗೂ ವೈದ್ಯರಿಗೂ ಗೌರವಿಸೋಣ" ಎಂದು ಹೇಳಿದ್ದಾರೆ.