ನವದೆಹಲಿ, ಮಾ 20 ( Daijiworld News/MSP): ರಾಜಸ್ತಾನದ ಜೈಪುರದಲ್ಲಿ ಕೊರೊನಾ ಸೋಂಕಿತ ಎಂದು ಬಿಂಬಿಸಲಾಗಿದ್ದ 69 ವರ್ಷದ ಇಟಲಿ ಪ್ರಜೆ ಸಾವನ್ನಪ್ಪಿರುವುದು ಕೊರೊನಾ ಸೋಂಕಿನಿಂದಲ್ಲ ಕಾರ್ಡಿಯಾಕ್ ಅರೆಸ್ಟ್ (ಹೃದಯ ಸ್ತಂಭನ)ನಿಂದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಪತ್ರಿಕಾಗೋಷ್ಟಿ ನಡೆಸಿ " ಪ್ರವಾಸಕ್ಕೆಂದು ಭಾರತ ರಾಜಸ್ತಾನಕ್ಕೆ ಆಗಮಿಸಿದ್ದ ಇಟಲಿ ಪ್ರವಾಸಿಗನಲ್ಲಿ ಕೊರೋನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿ ಬಳಿಕ ಆತನ ವರದಿಯಲ್ಲಿ ಕೊರೊನಾ ನೆಗೆಟಿವ್ ಕಂಡುಬಂದಿತ್ತು. ಆದರೆ ಕಾರ್ಡಿಯಾಕ್ ಅರೆಸ್ಟ್ ನಿಂದ ಪ್ರವಾಸಿಗ ಸಾವನ್ನಪ್ಪಿದ್ದಾನೆ. ಹೀಗಾಗಿ ಭಾರತದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಾಲಿನಲ್ಲಿ ಜೈಪುರದಲ್ಲಿ ಮೃತಪಟ್ಟ ಇಟಾನಿಯನ್ ವ್ಯಕ್ತಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸೋಂಕಿತರ ಸಂಖ್ಯೆ ದೇಶದಲ್ಲಿ 223ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ 32 ಮಂದಿ ವಿದೇಶಿಗರು ಸೇರಿದ್ದಾರೆ. ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 6,700 ಕ್ಕೂ ಜನರನ್ನು ನಿಗಾದಲ್ಲಿರಿಸಲಾಗಿದ್ದು ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಭಾರತದಲ್ಲಿ ಸಾವನ್ನಪ್ಪಿದ್ದ ಕೊರೊನಾ ಸೋಂಕಿತರೆಲ್ಲರೂ 64 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು , ಅವರು ಇತರ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದರು.