ಭೋಪಾಲ್, ಮಾ 20 (DaijiworldNews/SM): ರಾಜಕೀಯ ಮೇಲಾಟದಿಂದಾಗಿ ಮಧ್ಯ ಪ್ರದೇಶದ ಕಾಂಗ್ರೆಸ್ ಸರಕಾರ ವಿಶ್ವಾಸ ಕಳೆದುಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಮಲ್ ನಾಥ್ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಜ್ಯಪಾಲ ಲಾಲ್ ಜಿ ಟಂಡನ್ ಅವರು ಅಂಗೀಕರಿಸಿದ್ದಾರೆ. ಆ ಮೂಲಕ ಮಧ್ಯಪ್ರದೇಶದ ರಾಜಕೀಯ ಹೈಡ್ರಾಮಕ್ಕೆ ತೆರೆ ಬಿದ್ದಾಂತಾಗಿದೆ.
ಇಂದು ಸಂಜೆಯ ವೇಳೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವಂತೆ ಕಮಲ್ ನಾಥ್ ಅವರಿದೆ ಗುರುವಾರ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ ತಮ್ಮ ಸರಕಾರದ ವಿರುದ್ಧ ಬಂಡಾಯ ಎದ್ದಿದ್ದ ತಮ್ಮದೇ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಹಿನ್ನೆಲೆಯಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು. ಈ ಹಿನ್ನೆಲೆ ಅನಿವಾರ್ಯವಾಗಿ ತಮ್ಮ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನು ಕಮಲ್ ನಾಥ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಇದು ಜನರ ಗೆಲುವು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಜನಪರ ಆಡಳಿತವನ್ನು ನಮ್ಮ ಸರಕಾರ ನೀಡಲಿದೆ ಎಂದಿದ್ದಾರೆ.