ನವದೆಹಲಿ, ಮಾ 2 ( Daijiworld News/MSP): ಭಾರತದಲ್ಲಿ ಕೊರೊನಾ ಸೋಂಕು ತಗುಲಿದವರ ಸಂಖ್ಯೆ ದೇಶದಲ್ಲಿ 250 ಕ್ಕೆ ಏರಿಕೆ ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೇಶದ ವಿವಿಧ ಕಡೆಗಳಲ್ಲಿ ಹೊಸದಾಗಿ 58 ಪ್ರಕರಣಗಳು ಪತ್ತೆಯಾಗಿದೆ. ಶುಕ್ರವಾರ ಒಂದೇ ದಿನ ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದೆ.
ಕೇರಳ , ತೆಲಂಗಾಣ, ಮಧ್ಯ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಸೋಂಕು ಪ್ರಕರಣ ಪತ್ತೆಯಾಗಿದೆ.
ತೆಲಂಗಾಣದಲ್ಲಿ ಹೊಸದಾಗಿ ಎರಡು ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ತೆಲಂಗಾಣದಲ್ಲಿನ ಇಬ್ಬರು ಇಂಡೊನೇಷ್ಯಾ ಪ್ರಜೆಗಳಲ್ಲಿ ಈ ಸೋಂಕು ದೃಢಪಟ್ಟಿದೆ. ಇದರೊಂದಿಗೆ ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ ಆಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ. ಶಂಕರ್ ತಿಳಿಸಿದ್ದಾರೆ.
ಮಧ್ಯ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ತಲಾ ಎರಡು ಪಾಸಿಟಿವ್ ಪ್ರಕರಣಗಳು ಮೊದಲ ಬಾರಿಗೆ ದೃಢಪಟ್ಟಿದೆ. ಕರ್ನಾಟಕದ ಮಟ್ಟಿಗೆ ಶುಕ್ರವಾರ ಒಂದಷ್ಟು ಅಶಾಭಾವ ಹುಟ್ಟಿಸಿದ್ದು ಯಾವುದೇ ಹೊಸ ಸೋಂಕು ಪ್ರಕರಣ ಪತ್ತೆಯಾಗದೆ, ಸೋಂಕು ತಗುಲಿದ ಟೆಕ್ಕಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.