ಮುಂಬೈ, ಮಾ21 ( Daijiworld News/MSP): ಇತ್ತೀಚಗಷ್ಟೇ ಇಂಗ್ಲೆಂಡ್ ನಿಂದ ಮರಳಿದ್ದ ಬೇಬಿ ಡಾಲ್ ಖ್ಯಾತಿಯ ಗಾಯಕಿ ಕನಿಕಾ ಕಪೂರ್ ಅವರಿಗೂ ಕೊರೊನಾ ಸೋಂಕು ತಗಲಿರುವುದು ದೃಡಪಟ್ಟಿದೆ. ಆದರೆ ವಿದೇಶದಿಂದ ಮರಳಿದ ಇವರು ಮನೆಯಲ್ಲಿ ಉಳಿದುಕೊಳ್ಳದೆ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದಾರೆ.
ಸತ್ಯ ಮರೆಮಾಚಿ ಸಾರ್ವಜನಿಕರನ್ನು ಅಪಾಯದ ಸ್ಥಿತಿಗೆ ತಂದೊಡ್ಡಿದ್ದ ಹಿನ್ನಲೆಯಲ್ಲಿ ನಿಕಾ ಕಪೂರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಾಂಕ್ರಾಮಿಕ ಕಾಯ್ದೆ 1987ರ ಸೆಕ್ಷನ್ 188, 269, 270ರಡಿ ಕೇಸು ದಾಖಲಾಗಿದೆ.
ಶುಕ್ರವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಆದೇಶ ಹೊರಡಿಸಿ ಕೇಸು ದಾಖಲಿಸಲಾಗಿದೆ. '' ಗಾಯಕಿ ಕನಿಕಾ ಅವರು ವಿದೇಶದಿಂದ ವಿಮಾನದಲ್ಲಿ ಲಕ್ನೊ ನಿಲ್ದಾಣಕ್ಕೆ ಬಂದಿಳಿದಾಗ ಕೊರೋನಾ ವೈರಸ್ ತಪಾಸಣೆಯ ಶಿಷ್ಠಾಚಾರಗಳನ್ನು ತಿಳಿದಿದ್ದರೂ ಅದನ್ನು ಮಾಡಿಸಿಕೊಳ್ಳಲಿಲ್ಲ. ಸೋಂಕು ಲಕ್ಷಣಗಳು ಕಂಡುಬಂದಿದ್ದರೂ ಕೂಡ ಪಾರ್ಟಿಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ಜೊತೆ ಬೆರೆತಿದ್ದಾರೆ, ಅವರಿಂದಾಗಿ ಇನ್ನಷ್ಟು ಮಂದಿಗೆ ಕೊರೋನಾ ಸೋಂಕು ತಗುಲಿರುವ ಸಾಧ್ಯತೆಯಿದೆ. ಹೀಗೆ ಬೇಜವಬ್ದಾರಿ ತೋರಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಕನಿಕಾ ಅವರ ತಂದೆ ರಾಜೀವ್ ಕಪೂರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಲಕ್ನೊಗೆ ಕನಿಕಾ ಬಂದ ಮೇಲೆ ಸುಮಾರು ಮೂರು ಪಾರ್ಟಿಯಲ್ಲಿ ಭಾಗವಹಿಸಿದ್ದಾಳೆ. ಇದಲ್ಲದೆ ಸುಮಾರು 400 ಜನರನ್ನು ಭೇಟಿ ಮಾಡಿದ್ದಾಳೆ ಎನ್ನುತ್ತಾರೆ. ಆದರೆ ಕನಿಕಾ ಕಪೂರ್ ಹೇಳುವುದೇ ಬೇರೆ. ನಾನು ವಿದ್ಯಾವಂತಳಾಗಿದ್ದು, ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ನಾನು ತಪಾಸಣೆಗೊಳಗಾಗಿದ್ದೆ. ನಾನು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ. ನನ್ನಲ್ಲಿ ಯಾವುದೇ ಜ್ವರದ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ ನಾಲ್ಕು ದಿನದ ಹಿಂದೆಯಷ್ಟೇ ಜ್ವರ ಕಾಣಿಸಿಕೊಂಡಿತು ಎಂದಿದ್ದಾರೆ