ಬೆಂಗಳೂರು, ಮಾ.21 (Daijiworld News/MB) : ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಮಾ. 31ರವರೆಗೂ ಬಾರ್, ಪಬ್ಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ಹೊಟೇಲ್ಗಳು ಪಾರ್ಸೆಲ್ ಸೇವೆಯನ್ನು ಮಾತ್ರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಶುಕ್ರವಾರ ವಿಧಾನ ಸೌಧದಲ್ಲಿ ಕೊರೊನಾ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕು ನಿಯಂತ್ರಣ ಮಾಡಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮದ ಭಾಗವಾಗಿ ಮಾರ್ಚ್ 31ರ ವರೆಗೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬಾರ್, ಪಬ್ಗಳನ್ನು ಬಂದ್ ಮಾಡಬೇಕು. ಹೋಟೆಲ್ಗಳಲ್ಲಿ ಗುಂಪಾಗಿ ಕುಳಿತು ಆಹಾರ ಸೇವನೆ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗಾಗಿ ಎಲ್ಲಾ ಹೊಟೇಲ್ಗಳು ಅಡುಗೆ ಮನೆ ತೆರೆದು ಊಟ ತಯಾರಿಸಿ ಪಾರ್ಸೆಲ್ ಸೇವೆ ಮಾತ್ರ ನೀಡಬಹುದು ಎಂದು ತಿಳಿಸಿದರು.
ರಾಜ್ಯದಲ್ಲಿ 500 ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯವಿರುವ 5 ಸಾವಿರ ಹಾಸಿಗೆ ಖರೀದಿಸಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಹಾರ ಧಾನ್ಯದ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಆಹಾರ ಮತ್ತು ಔಷಧ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು. ಈ ಸಂಬಂಧ ವರ್ತಕರು, ಔಷಧ ಕಂಪನಿ ಮಾಲೀಕರೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತೆ ಪ್ರಧಾನಿ ಅವರೂ ಸೂಚಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಕೊರೊನಾ ನಿಯಂತ್ರಣದ ಕುರಿತಾಗಿ ಪ್ರಧಾನಿ ಮೋದಿಯೊಂದಿಗೆ ಶುಕ್ರವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ರಾಜ್ಯದ ಪ್ರಸ್ತುತ ಪರಿಸ್ಥಿತಿ ಕುರಿತಾಗಿ ಪ್ರಧಾನಿಯವರೆಗೆ ತಿಳಿಸಿದ್ದೇವೆ. ಅವರು ಎಲ್ಲಾ ರಾಜ್ಯಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದ್ದಾರೆ. ಮಂಗಳೂರು, ಹುಬ್ಬಳ್ಳಿಯಲ್ಲಿ ಪ್ರಯೋಗಾಲಯ ಸ್ಥಾಪಿಸುವಂತೆ ಮೋದಿಯವರಲ್ಲಿ ಮನವಿ ಮಾಡಿದ್ದೇನೆ, ಅದಕ್ಕೆ ಅವರು ಸಮ್ಮತಿ ನೀಡಿದ್ದಾರೆ ಎಂದರು.
ಸಾಕಷ್ಟು ಮಂದಿ ಊಟ ತಿಂಡಿಗೆ ಹೊಟೇಲ್ಗಳನ್ನು ಅವಲಂಬಿಸಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಟೇಲ್ ಮಾಲಕರು ಅಡುಗೆ ಮನೆ ತೆರೆದು ಆಹಾರ ಸಿದ್ಧಪಡಿಸಿ ಪಾರ್ಸೆಲ್ ಸೇವೆಯನ್ನು ನೀಡಿ ಸಹಕರಿಸಬೇಕು. ಇನ್ನು ಈ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಹೆಚ್ಚು ದರ ವಸೂಲಿ ಮಾಡಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.