ನವದೆಹಲಿ, ಮಾ.21 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಂತಹ (ಎನ್ಪಿಆರ್) ಯೋಜನೆಗಳನ್ನು ಕೊರೊನಾವೈರಸ್ ಭೀತಿ ಕಾರಣದಿಂದಾಗಿ 3 ತಿಂಗಳ ಮಟ್ಟಿಗೆ ಮುಂದೂಡಿಕೆ ಮಾಡಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ಕೊರೊನಾ ವೈರಸ್ ಜನರು ಹೆಚ್ಚಾಗಿ ಒಂದು ಪ್ರದೇಶದಲ್ಲಿ ಒಟ್ಟುಗೂಡುವುದರಿಂದ ಹರಡುವ ಸಾಧ್ಯತೆ ಹೆಚ್ಚು. ಇದನ್ನು ಪಡೆಯುವ ನಿಟ್ಟಿನಲ್ಲಿ ಪ್ರತಿಭಟನೆ ಹಿಂಪಡೆಯುವಂತೆ ಪ್ರತಿಭಟನಾಕಾರರಲ್ಲಿ ಸರ್ಕಾರ ಮನವಿ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿರುವವರನ್ನು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರ ಭೇಟಿ ಮಾಡಬೇಕು. ಕೊರೊನಾ ಭೀತಿ ಇರುವ ಕಾರಣದಿಂದಾಗಿ ಎಲ್ಲಾ ಯೋಜನೆಗಳನ್ನೂ ಮುಂದೂಡುತ್ತೇವೆ ಎಂದು ಅವರಿಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ನವರು, ಯಾರೂ ಕೂಡಾ ಏಪ್ರಿಲ್ 2 ರವರೆಗೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಮನವಿ ಮಾಡಿದ್ದು ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಭಟನೆಗಳನ್ನೂ ಹಿಂಪಡೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.