ನವದೆಹಲಿ, ಮಾ.21 (Daijiworld News/MB) : ಸರ್ಕಾರ ಕೊರೊನಾ ನಿರ್ಮೂಲನೆ ಮಾಡುವ ಉದ್ದೇಶದಿಂದಾಗಿ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಹಾಗೆಯೇ ಶಂಕಿತ ರೋಗಿಗಳು ಗೃಹ ದಿಗ್ಬಂಧನ ನಿಯಮ ಉಲ್ಲಂಘಿಸಿದರೆ ಆರು ತಿಂಗಳು ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಕಾನೂನು ಅವಕಾಶ ಉಪಯೋಗಿಸಿ ಜನರು ಗೃಹ ದಿಗ್ಬಂಧನ ಉಲ್ಲಂಘನೆ ಮಾಡದಂತೆ ಹಾಗೂ ರೋಗ ಹರಡದಂತೆ ತಡೆಯಲು ಅಧಿಕಾರ ನೀಡಲಾಗಿದೆ. ಈ ಸಾಂಕ್ರಾಮಿಕ ರೋಗ ತಡೆಗಟ್ಟಲು ದಿಗ್ಬಂಧನ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ ಎಂದು ತಿಳಿಸಿದೆ.
ಸಾಂಕ್ರಾಮಿಕ ರೋಗ ಕಾಯ್ದೆಯ ಸೆಕ್ಷನ್ 10 ಮತ್ತು ವಿಪತ್ತು ನಿರ್ವಹಣೆ ಕಾಯ್ದೆಯ ಸೆಕ್ಷನ್ 10 ರ ಅನ್ವಯ ಆರು ತಿಂಗಳು ಜೈಲು ಹಾಗೂ 1 ಸಾವಿರ ರೂಪಾಯಿವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ ಎಂದು ವರದಿಯಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ಈ ಕಾನೂನು ಅವಕಾಶವನ್ನು ಬಳಸಿಕೊಂಡಿದ್ದು ರಾಜ್ಯಗಳು ಕೂಡಾ ಬಳಸುವಂತೆ ಸೂಚಿಸಲಾಗಿದೆ. ಜನರು ಪ್ರತ್ಯೇಕ ಕೇಂದ್ರಗಳಿಂದ ಪರಾರಿಯಾಗುತ್ತಿದ್ದು ಗೃಹ ದಿಗ್ಬಂಧನವನ್ನೂ ಉಲ್ಲಂಘನೆ ಮಾಡುತ್ತಿರುವ ಹಿನ್ನಲೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.