ತಿರುವನಂತಪುರ, ಮಾ21 ( Daijiworld News/MSP): ಕೊರೊನಾ ಮಹಾಮಾರಿಯನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಲ್ಲ. ಪ್ರಧಾನಿ ಕರೆ ನೀಡಿರುವ ಜನತಾ ಕರ್ಪ್ಯೂವನ್ನು ನಾವು ತಪ್ಪದೆ ಪಾಲಿಸುತ್ತೇವೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ಪ್ರಧಾನಿ ಕರೆ ನೀಡಿರುವ ಜನತಾ ಕರ್ಪ್ಯೂಗೆ ರಾಷ್ಟ್ರವ್ಯಾಪ್ತಿ ಬೆಂಬಲ ಸಿಕ್ಕಿದ್ದು ಈಗಾಗಲೇ ವೈರಸ್ ಹರಡದಂತೆ ನೂರಾರು ಸಂಘಟನೆಗಳು ಸಮರ ಸಾರಿವೆ. ಎಡರಂಗ ಪ್ರಾಬಲ್ಯವಿರುವ ಕೇರಳದಲ್ಲಿ ಬಿಜೆಪಿ ಆಡಳಿತದ ಕೇಂದ್ರದ ನಿಲುವನ್ನು ಹೆಚ್ಚಾಗಿ ವಿರೋಧಿಸುತ್ತಿತ್ತು. ಆದರೆ ಮೊದಲ ಬಾರಿಗೆ ಎಂಬಂತೆ ಪಾಲಿಟಿಕ್ಸ್ ಬದಿಗಿರಿಸಿ ಜನ ಹಿತ ತೋರುವ ಪ್ರವೃತ್ತಿಯನ್ನು ಎತ್ತಿಹಿಡಿದಿರುವ ಕೇರಳ ಸರ್ಕಾರ ಪ್ರಧಾನಮಂತ್ರಿಯವರ ಜನತಾ ಕರ್ಫ್ಯೂ ಕರೆಯನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್, ಕೊರೊನಾ ವೈರಸ್ ಸೋಂಕಿನಿಂದ ರಾಜ್ಯದಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಜನತಾ ಕರ್ಫ್ಯೂ ಜಾರಿಯಲ್ಲಿರುವ ವೇಳೆ ಎಲ್ಲರೂ ತಮ್ಮ ಮನೆ ಮತ್ತು ಪರಿಸರ ಹಾಗೂ ವೈಯಕ್ತಿಕ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನಹರಿಸುವಂತೆಯೂ ಅವರು ಕೇರಳೀಯರಿಗೆ ಮನವಿ ಮಾಡಿದ್ದಾರೆ.
ಮಾತ್ರವಲ್ಲದೆ ಜನತಾ ಕರ್ಫ್ಯೂಗೆ ಬೆಂಬಲವಾಗಿ ಸಾರ್ವಜನಿಕ ರಸ್ತೆ ಸಾರಿಗೆ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ.