ನವದೆಹಲಿ, ಮಾ.21 (Daijiworld News/MB) : ಮಾಸ್ಕ್ ಬೆಲೆಯನ್ನು 10 ರೂ ಗಳಿಗಿಂತ ಹೆಚ್ಚು ಹಾಗೂ 200 ಎಂಎಲ್ ಹ್ಯಾಂಡ್ ಸ್ಯಾನಿಟೈಸರ್ ಬೆಲೆಯನ್ನು 100 ರೂ. ಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದೆಂದು ಕೇಂದ್ರ ಸರ್ಕಾರ ಆದೇಶಿಸಿದೆ.
ಈ ಕುರಿತಾಗಿ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾಹಿತಿ ನೀಡಿದ್ದು ಜನರು ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ವೈರಸ್ ಹಿನ್ನಲೆಯಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳ ಬೆಲೆಯನ್ನು ಅತೀ ಹೆಚ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಎರಡೂ ವಸ್ತುಗಳು ರೋಗ ಸಾಂಕ್ರಾಮಿಕವಾಗಿ ಹರಡದಂತೆ ತಡೆಗಟ್ಟಲು ಮುಖ್ಯವಾಗಿದೆ ಎಂದು ಆರೋಗ್ಯ ಇಲಾಖೆಯೂ ತಿಳಿಸಿದೆ. ಆ ನಿಟ್ಟಿನಲ್ಲಿ 2 ವಸ್ತುಗಳ ಬೆಲೆಯನ್ನು ನಿಗದಿತ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ನಕಲಿ ಸ್ಯಾನಿಟೈಸರ್ಗಳ ಮಾರಾಟದ ಜಾಲವೂ ಸಕ್ರಿಯರಾಗಿರುವುದು ತಿಳಿದುಬಂದಿದೆ. ನಕಲಿ ಸ್ಯಾನಿಟೈಸರ್ಗಳ ಮಾರಾಟ ಮಾಡುವವರ ಮೇಲೆ ಗಂಭೀರ ಪ್ರಕರಣ ದಾಖಲಿಸಲಾಗುವುದು. ಅಧಿಕೃತವಾಗಿ ದಾಖಲೆ ಇಲ್ಲದ ಯಾವುದೇ ಮೂರನೇ ವ್ಯಕ್ತಿ ಈ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಆದೇಶಿಸಿದ್ದಾರೆ.
ಭಾರತದಲ್ಲಿ ಕೊರೊನಾ ಭೀತಿ ಹೆಚ್ಚುತ್ತಲ್ಲಿದ್ದು ಜನರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಖರೀದಿ ಮಾಡಲು ಮುಂದಾಗಿದ್ದು ಈ ಪರಿಣಾಮ ಇದರ ಅಭಾವವೂ ಉಂಟಾಗಿದೆ.