ನವದೆಹಲಿ, ಮಾ21 ( Daijiworld News/MSP): ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಜನತಾ ಬಂದ್'ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೇ ಕೂಡ ಇದಕ್ಕೆ ಬೆಂಬಲ ನೀಡಿದೆ.
ಭಾನುವಾರ ದೇಶದ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಪ್ಯಾಸೆಂಜರ್, ಮೇಲ್, ಎಕ್ಸ್'ಪ್ರೆಸ್ ರೈಲುಗಳ ಸಂಚಾರ ನಡೆಸದೇ ಇರಲು ರೈಲ್ವೇ ಇಲಾಖೆ ನಿರ್ಧರಿಸಿದ್ದು ಈ ಹಿನ್ನಲೆಯಲ್ಲಿ ಸುಮಾರು 3700 ರೈಲುಗಳ ಸಂಚಾರವನ್ನು ರೈಲ್ವೇ ಇಲಾಖೆಯು ರದ್ದುಗೊಳಿಸಿದೆ. ಶನಿವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಭಾನಾವಾರ ರಾತ್ರಿ 10 ಗಂಟೆಯವರೆಗೆ ದೇಶದ ಯಾವುದೇ ನಿಲ್ದಾಣಗಳಿಂದ ಪ್ಯಾಸೆಂಜರ್ ರೈಲು ಹೊರಡುವುದಿಲ್ಲ.ಆದರೆ ನಿರ್ಧಾರ ಕೈಗೊಂಡ ಅವಧಿಗೂ ಮುನ್ನ ಹೊರಡುವ ರೈಲುಗಳ ಸಂಚಾರ, ಗುರಿ ಮುಟ್ಟುವವರೆಗೂ ಮುಂದುವರೆಸಲಿವೆ ಎಂದು ಇಲಾಖೆ ತಿಳಿಸಿದೆ.
ಇನ್ನು ಈಗಾಗಲೇ ರೈಲ್ವೇ ಇಲಾಖೆ ಸುಮಾರು 245 ರೈಲುಗಳನ್ನು ಸ್ಥಗಿತಗೊಳಿಸಿದೆ. ಟಿಕೆಟ್ ರದ್ದತಿ ಹಾಗೂ ಪ್ರಯಾಣಿಕರ ಕೊರತೆಯಿಂದ ಈ ರೈಲುಗಳ ಓಡಾಟ ನಿಲ್ಲಿಸಲಾಗಿದೆ. ಉತ್ತರ ವಿಭಾಗೀಯ ರೈಲ್ವೇಯಲ್ಲೇ ಮಾ. 1ರಿಂದ 12ರವರೆಗೂ 12 ಲಕ್ಷ ಟಿಕೆಟ್ಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾ.22ರಿಂದ ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ ಎಲ್ಲಾ ರೀತಿಯ ಆಹಾರ ಪೂರೈಕೆ ಬಂದ್'ಗೆ ನಿರ್ಧರಿಸಿರುವುದಲ್ಲದೇ, ಫುಡ್ ಪ್ಲಾಜಾಗಳು, ರಿಫ್ರೆಶ್ಮೆಂಟ್ ಕೊಠಡಿಗಳು, ಜನ ಆಹಾರ ಕೇಂದ್ರಗಳು ಹಾಗೂ ಸೆಲ್ ಕಿಚನ್ಗಳನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆಯೂ ಇಲಾಖೆ ನಿರ್ದೇಶಿಸಿದೆ.