ಲಕ್ನೋ, ಮಾ21 ( Daijiworld News/MSP): ಕೊರೊನಾದಿಂದ ಹೆಚ್ಚಿನ ರಾಜ್ಯದಲ್ಲಿ ಜನಜೀವನವೇ ಅಸ್ತವ್ಯಸ್ತಗೊಂಡಿದ್ದು, ದಿನಗೂಲಿ ನಂಬಿ ಬದುಕುತ್ತಿದ್ದ ಕಾರ್ಮಿಕರ ಬದುಕಂತು ಮೂರಬಟ್ಟೆಯಾಗಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚು ದಿನಗೂಲಿ ಕಾರ್ಮಿಕರಿದ್ದು ಇವರ ಸಹಾಯಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಶನಿವಾರದಂದು ಕಾರ್ಮಿಕರಿಗೆ 1,000 ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ.
ಸುಮಾರು 35 ಲಕ್ಷ ಕಾರ್ಮಿಕರಲ್ಲಿ 20,37,000 ದೈನಂದಿನ ಕೂಲಿ ಕಾರ್ಮಿಕರು ಮತ್ತು ರಿಕ್ಷಾ ಚಾಲಕರಿದ್ದಾರೆ. ಇದರೊಂದಿಗೆ ಸಣ್ಣ ಪುಟ್ಟ ಉದ್ಯಮ ಮತ್ತು ದಿನನಿತ್ಯದ ಆದಾಯವನ್ನು ನಂಬಿ ಬದುಕುವ ಸುಮಾರು 15 ಲಕ್ಷ ಜನರು ಸಹ ಈ ಪರಿಹಾರ ಯೋಜನೆಯ ಅಂಗವಾಗಿದ್ದಾರೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ,ಆದಿತ್ಯನಾಥ್ , "ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ದೈನಂದಿನ ಕೂಲಿ ಕಾರ್ಮಿಕರು, ರಿಕ್ಷಾ ಎಳೆಯುವವರು ಹಾಗೂ ಇತರ ಕೂಲಿ ಕಾರ್ಮಿಕರಿಗೆ ರೂ. 1,000 ನೀಡಲು ನಿರ್ಧರಿಸಿದ್ದೇವೆ. ದೈನಂದಿನ ಆದಾಯ ನಂಬಿ ಬದುಕುವ ಸುಮಾರು 15 ಲಕ್ಷ ಜನರಿಗೆ ಪರಿಹಾರವನ್ನು ನೀಡಲಾಗುವುದು" ಎಂದಿದ್ದಾರೆ