ಬೆಂಗಳೂರು, ಮಾ.21 (DaijiworldNews/PY) : "ಬೇರೆ ದೇಶಗಳು ಕೊರೊನಾ ತಡೆಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿವೆ. ಆದರೆ ಕೇಂದ್ರ ಸರ್ಕಾರ ಯಾವುದೇ ಪ್ಯಾಕೇಜ್ ಕೊಟ್ಟಿಲ್ಲ. ಬರೇ ಭಾಷಣ ಮಾಡುವುದರಿಂದ ಕೊರೊನಾ ಸಮಸ್ಯೆ ಸ್ಥಗಿತವಾಗುವುದಿಲ್ಲ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಜನತಾ ಕರ್ಫ್ಯೂ ಕರೆಯನ್ನು ಟೀಕಿಸಿದ್ದಾರೆ. "ಪ್ರಧಾನಿ ಮೋದಿ ಅವರು ಕೇವಲ ಭಾಷಣ ಮಾತ್ರ ಮಾಡಿದ್ಧಾರೆ. ಅವರ ಭಾಷಣದಲ್ಲಿ ಯಾವುದೇ ಸತ್ವ ಒಳಗೊಂಡಿಲ್ಲ. ಪ್ರಧಾನಿ ಮೋದಿ ಅವರು ಕೊರೊನಾ ತಡೆಗೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ವಿಚಾರವನ್ನು ತಿಳಿಸಿಲ್ಲ. ಏನು ಪರಿಹಾರ ಸೂಚಿಸಿಲ್ಲ. ಕೇಂದ್ರದಿಂದ ತೆಗೆದುಕೊಳ್ಳುವ ತುರ್ತು ಕ್ರಮಗಳ ವಿಚಾರವಾಗಿ ಬೆಳಕು ಚೆಲ್ಲಿಲ್ಲ" ಎಂದು ತಿಳಿಸಿದರು.
"ಕೊರೊನಾ ನಿಯಂತ್ರಣಕ್ಕೆ ಬೇರೆ ದೇಶಗಳಿಂದ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿವೆ. ಆದರೆ, ಕೇಂದ್ರ ಸರ್ಕಾರ ಯಾವುದೇ ಪ್ಯಾಕೇಜ್ ನೀಡಿಲ್ಲ. ಕೊರೊನಾ ಸಮಸ್ಯೆ ಬರೇ ಭಾಷಣ ಮಾಡುವುದರಿಂದ ನಿಯಂತ್ರಣವಾಗುವುದಿಲ್ಲ" ಎಂದರು.
"ಜನರು ಈಗಾಗಲೇ ಮನೆಯಲ್ಲೇ ಇದ್ದಾರೆ. ಈಗಾಗಲೇ ರಾಜ್ಯದಲ್ಲಿ ಈ ರೀತಿಯ ಕರ್ಫ್ಯೂ ಜಾರಿಯಲ್ಲಿದೆ. ಪ್ರಧಾನಿ ಮೋದಿಯವರು ಇದನ್ನ ವಿಶೇಷವಾಗಿ ಹೇಳಬೇಕಾಗಿಲ್ಲ. ಈಗಾಗಲೇ ಈ ಬಗ್ಗೆ ಜನರಿಗೆ ತಿಳಿದಿದೆ" ಎಂದು ಹೇಳಿದರು.
ಶನಿವಾರ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಮಾಸ್ಕ್ ಹಾಕಿ ತೆರಳಿದ್ದರು. ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿ ಮಾಸ್ಕ್ ಹಾಕಿಕೊಂಡು ಶಕ್ತಿಸೌಧಕ್ಕೆ ಆಗಮಿಸಿದ್ದು, ಆದರೆ ಈ ವಿಚಾರವಾಗಿ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಸಿದ್ದರಾಮಯ್ಯ ಅವರು ಶನಿವಾರವೂ ಕೂಡಾ ಥರ್ಮಲ್ ಸ್ಕ್ರಿನಿಂಗ್ ಮಾಡಿಸಿಕೊಂಡಿದ್ದು, ಈ ಸಂದರ್ಭ 93.3 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ಸಿದ್ದರಾಮಯ್ಯ ಅವರು ನಿರ್ಭಯಾ ಹತ್ಯಾಚಾರಿಗಳನ್ನು ಗಲ್ಲಿಗೇರಿಸಿರುವುದನ್ನು ಸ್ವಾಗತಿಸಿದ್ದು, ಕೊನೆಗೂ ನ್ಯಾಯ ದೊರಕಿದೆ. ಅತ್ಯಾಚಾರ ಯಾರೇ ಮಾಡಿದ್ದರೂ ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ಶಿಕ್ಷೆ ತಡವಾಗಿದ್ದರೂ ನಿರ್ಭಯಾ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.