ನವದೆಹಲಿ, ಮಾ.21 (Daijiworld News/MB) : ಕೊರೊನಾ ವೈರಸ್ ಸಾಂಕ್ರಮಿಕವಾಗಿ ಹರಡುತ್ತಿದ್ದು ಈ ನಡುವೆ ಹಿರಿಯ ಬಾಕ್ಸರ್ ಹಾಗೂ ರಾಜ್ಯಸಭಾ ಸಂಸದೆ ಮೇರಿಕೋಮ್ ವಿಶ್ವ ಆರೋಗ್ಯ ಸಂಘಟನೆ(ಡಬ್ಲುಟಿಎ)ಹಾಗೂ ಸರಕಾರಗಳು ವಿಶ್ವದಾದ್ಯಂತ ವಿಧಿಸಿರುವ 14 ದಿನಗಳ ನಿರ್ಬಂಧ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ.
ಮೇರಿ ಕೋಮ್ ಜೋರ್ಡನ್ನ ಅಮ್ಮಾನ್ನಲ್ಲಿ ಏಶ್ಯ-ಒಶಿಯಾನಿಯ ಒಲಿಂಪಿಕ್ಸ್ ಕ್ವಾಲಿಫೈಯರ್ನಲ್ಲಿ ಸ್ಪರ್ಧಿಸಿದ್ದು ಮಾ.13ರಂದು ಸ್ವದೇಶಕ್ಕೆ ವಾಪಸಾಗಿದ್ದರು. ಆ ಬಳಿಕ ಮೇರಿಕೋಮ್ ಕನಿಷ್ಠ 14 ದಿನಗಳ ಕಾಲ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕಾಗಿತ್ತು. ಆದರೆ ಅವರು ಮಾರ್ಚ್ 18 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಿದ್ದರು.
ರಾಷ್ಟ್ರಪತಿಗಳ ಅಧಿಕೃತ ಟ್ವೀಟರ್ನಲ್ಲಿ ಮಾಡಿರುವ ಟ್ವೀಟ್ನಲ್ಲಿ ನಾಲ್ಕು ಚಿತ್ರಗಳ ಪೈಕಿ ಒಂದರಲ್ಲಿ ಮೇರಿಕೋಮ್ ಅವರು ಇತರ ಸಂಸತ್ ಸದಸ್ಯರೊಂದಿಗೆ ಕಾಣಿಸಿಕೊಂಡಿದ್ದರು. ಆ ಫೋಟೋದಲ್ಲಿ ರಾಷ್ಟ್ರಪತಿ ಕೋವಿಂದ್ ಅವರು ಉತ್ತರಪ್ರದೇಶ ಹಾಗೂ ರಾಜಸ್ಥಾನ ಸಂಸತ್ ಸದಸ್ಯರಿಗೆ ಇಂದು ಬೆಳಿಗ್ಗೆ ಉಪಹಾರ ಕೂಟ ಆಯೋಜನೆ ಮಾಡಿದ್ದರು ಎಂದು ಬರೆದಿತ್ತು.
ಅದೇ ದಿನ ರಾಷ್ಟ್ರಪತಿ ಭವನದಲ್ಲಿ ಬಿಜೆಪಿ ಸಂಸದ ದುಷ್ಯಂತ್ ಸಿಂಗ್ ಅವರು ಸೋಂಕು ಪೀಡಿತ ಬಾಲಿವುಡ್ ಗಾಐಕಿ ಕನಿಕಾ ಕಪೂರ್ ಅವರನ್ನು ಸಂಪರ್ಕಿಸಿದ್ದರು. ಆ ಕಾರಣದಿಂದಾಗಿ ಸಿಂಗ್ ಅವರು ಸ್ವರ್ಯ ಗೃಹ ಬಂಧನ ವಿಧಿಸಿಕೊಂಡಿದ್ದಾರೆ.
ಬಾಕ್ಸಿಂಗ್ ಕೋಚ್ ಸ್ಯಾಂಟಿಯಾಗೊ "ಜೋರ್ಡನ್ನಲ್ಲಿ ಭಾಗವಹಿಸಿರುವ ಭಾರತದ ಬಾಕ್ಸಿಂಗ್ ತಂಡ ಕಡ್ಡಾಯವಾಗಿ 14 ದಿನಗಳ ಕಾಲ ಗೃಹಬಂಧನಕ್ಕೆ ಒಳಗಾಗಿದೆ" ಎಂದು ಶುಕ್ರವಾರ ತಿಳಿಸಿದ್ದಾರೆ.
ಮೇರಿಕೋಮ್ ಅವರು, "ನಾನು ಜೋರ್ಡನ್ನಿಂದ ವಾಪಾಸ್ ಬಂದ ನಂತರ ಮನೆಯಲ್ಲೇ ಇದ್ದೆ. ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಮಾತ್ರ ಹಾಜರಾಗಿದ್ದೆ. ದುಷ್ಯಂತ್ರನ್ನು ನಾನು ಭೇಟಿಯಾಗಿಲ್ಲ ಅಥವಾ ಕೈಕುಲುಕಿಲ್ಲ. ನನ್ನ ೧೪ ದಿನಗಳ ಗೃಹ ಬಂಧನವೂ ಕೂಡಾ ಕೊನೆಯಾಗಿದೆ. ಮುಂದಿನ 3-4 ದಿನಗಳು ಮಾತ್ರ ಮನೆಯಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಈ ಉಪಾಹಾರ ಕೂಟದಲ್ಲಿ ದುಷ್ಯಂತ್ ಸಿಂಗ್ ರಾಷ್ಟ್ರಪತಿಯವರನ್ನು ಭೇಟಿಯಾಗಿದ್ದ ಕಾರಣದಿಂದಾಗಿ ರಾಷ್ಟ್ರಪತಿ ಕೋವಿಂದ್ ಅವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.