ಕೊಲ್ಕತ್ತ, ಮಾ.21 (DaijiworldNews/PY) : ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಜನತಾ ಕರ್ಫ್ಯೂ ಆಚರಿಸಲು ಕರೆ ನೀಡಿದ್ದಾರೆ. ಭಾನುವಾರದಂದು ಅಗತ್ಯ ಕ್ಷೇತ್ರ ಬಿಟ್ಟು ಬೇರೆಲ್ಲಾ ಕ್ಷೇತ್ರದ ಉದ್ಯೋಗಿಗಳು ಹಾಗು ನೌಕರರು ಮನೆಯಿಂದ ಹೊರಕ್ಕೆ ಬರಬೇಡಿ ಎಂದು ಮನವಿ ಮಾಡಿದ್ಧಾರೆ. ಆದರೆ, ಪ್ರಧಾನಿ ಮೋದಿ ಅವರ ಮಾತಿಗೆ ಸದಾ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ರಾಜ್ಯದ ಶಾಲೆಗಳ ಶಿಕ್ಷಕರು ಭಾನುವಾರದಂದು ಶಾಲೆಗೆ ಹಾಜರಾಗಬೇಕು ಎಂದು ಆದೇಶ ಹೊರಡಿಸಿದ್ಧಾರೆ.
ವಿದ್ಯಾರ್ಥಿಗಳ ಮನೆಗೆ ಮಧ್ಯಾಹ್ನದ ಬಿಸಿಯೂಟವನ್ನು ತಲುಪಿಸಬೇಕು ಎನ್ನುವ ಆದೇಶವನ್ನು ಸರ್ಕಾರ ಮಾಡಿದೆ. ಆ ವಿಚಾರವಾಗಿ ಪೂರ್ವ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಶನಿವಾರ ಹಾಗೂ ಭಾನುವಾರ ಶಾಲೆಗಳಲ್ಲಿ ಶಾಲೆಯ ಶಿಕ್ಷಕರು ಹಾಜರಾಗಬೇಕು ಎಂದು ಹೇಳಲಾಗಿದೆ.
ಬಿಸಿಯೂಟದ ಪರ್ಯಾಯವಾಗಿ ತಿಂಗಳಿಗೆ ಎರಡು ಕೆ.ಜಿ. ಅಕ್ಕಿ ಮತ್ತು ಎರಡು ಕೆ.ಜಿ ಆಲೂಗಡ್ಡೆಯನ್ನು ಪ್ರತೀ ವಿದ್ಯಾರ್ಥಿಗಳಿಗೆ ನೀಡಬೇಕು. ಮಕ್ಕಳ ಪಾಲಕರು ಬಂದು ಅದನ್ನು ತೆಗೆದುಕೊಂಡುಹೋಗಬೇಕು. ಶಾಲೆಯ ಆಡಳಿತದವರೇ ಮಾರುಕಟ್ಟೆಗೆ ಹೋಗಿ ಆಲೂಗಡ್ಡೆಯನ್ನು 18 ರೂಪಾಯಿ ಕೆ.ಜಿ.ಯಂತೆ ತರಬೇಕು. ಅದರೊಂದಿಗೆ ಅಕ್ಕಿಯನ್ನೂ ಎರಡು ಕೆ.ಜಿ.ಯ ಪ್ಯಾಕೆಟ್ಗಳಾಗಿ ಮಾಡಬೇಕು. ಶನಿವಾರ ಭಾನುವಾರದಂದು ಈ ಕೆಲಸ ಮಾಡಲೆಂದೇ ನಾವು ಶಿಕ್ಷಕರನ್ನು ಕರೆದಿದ್ದೇವೆ ಎಂದು ಟಿಎಂಸಿ ಪಕ್ಷ ತಿಳಿಸಿದೆ.
ಬಿಜೆಪಿಯು ಟಿಎಂಸಿ ಪಕ್ಷದ ಈ ಆದೇಶವನ್ನು ಬಲವಾಗಿ ಖಂಡಿಸಿದ್ದು, ರಾಜ್ಯ ಸರ್ಕಾರ ಪ್ರಧಾನಿ ಅವರಿಗೆ ಅಗೌರವ ಸಲ್ಲಿಸಬೇಕೆಂಬ ಉದ್ದೇಶದಿಂದ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ ಎಂದು ವಿರೋಧಿಸಿದೆ.
ಬಿಜೆಪಿ, ಪ್ರಧಾನಿ ಮೋದಿ ಅವರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅಗತ್ಯವಾದ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ರಾಜ್ಯದ ಬಡ ಕುಟುಂಬಗಳು ಬಿಸಿಯೂಟದ ಮೇಲೆ ನಿಂತಿದೆ. ಹಾಗಾಗಿ ಇದೂ ಕೂಡಾ ಒಂದು ಅಗತ್ಯವಾದ ಕೆಲಸವಾಗಿದ್ದು, ನಾವು ಅದನ್ನು ಮಾಡಿಸುತ್ತೇವೆ ಎಂದು ಟಿಎಂಸಿಯ ವಕ್ತಾರ ಸ್ನೇಹಶಿಸ್ ಚಕ್ರವರ್ತಿ ತಿಳಿಸಿದ್ಧಾರೆ.
ರೈಲಿನ ಸೇವೆ ಭಾನುವಾರದಂದು ಇಲ್ಲದ ಕಾರಣ ಶಾಲೆಗೆ ಬರುವುದು ತಮಗೆ ಕಷ್ಟವಾಗುತ್ತದೆ ಎಂದು ಅನೇಕ ಶಿಕ್ಷಕರು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.