ನವದೆಹಲಿ, ಮಾ.21 (DaijiworldNews/PY) : ಕೊರೊನಾ ವೈರಸ್ ಭೀತಿಯಿಂದಾಗಿ ಹಲವರಲ್ಲಿ ಉದ್ಯೋಗ ಕಳೆದುಕೊಳ್ಳುವ ಆತಂಕ ಸೃಷ್ಠಿಯಾಗಿದ್ದು, ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ಪ್ರತಿನಿಧಿಸುವ ಸಂಘಟನೆಯಾದ ಖಾಸಗಿ ಭದ್ರತಾ ಕೈಗಾರಿಕೆ ಕೇಂದ್ರೀಯ ಒಕ್ಕೂಟವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಜೀವನೋಪಾಯಕ್ಕೆ ನೆರವಾಗಲು ಮನವಿ ಮಾಡಿದೆ.
ಪ್ರಸ್ತುತ 85 ಲಕ್ಷ ಜನರು ಖಾಸಗಿ ಭದ್ರತಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಈ ಸಂಖ್ಯೆ ವಾರ್ಷಿಕವಾಗಿ ಶೇ.22ರಷ್ಟು ಅಧಿಕವಾಗುತ್ತಿದೆ. ಇದು ಅತಿ ಹೆಚ್ಚು ಉದ್ಯೋಗ ಸೃಷ್ಠಿಸುವ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಕಾರ್ಪೊರೇಟ್ ಕಚೇರಿಗಳು, ಶೋರೂಂ, ಚಿತ್ರಮಂದಿರಗಳು, ಮಾಲ್, ಹೋಟೆಲ್ ಮುಚ್ಚಿರುವ ಕಾರಣದಿಂದ ಹೆಚ್ಚಿನ ಭದ್ರತಾ ಸಿಬ್ಬಂದಿಗಳ ಅಗತ್ಯವಿಲ್ಲ ಎಂದು ವಾಪಾಸ್ ಕಳುಹಿಸಲಾಗುತ್ತಿದೆ. ಸಂಸ್ಥೆ, ಕಂಪೆನಿಗಳು ಕೆಲಸ ಮಾಡುವ ಸಿಬ್ಬಂದಿಗಷ್ಟೇ ವೇತನ ನೀಡುವುದಾಗಿ ತಿಳಿಸುತ್ತಿವೆ. ಉಳಿದ ಸಿಬ್ಬಂದಿಗಳಿಗೆ ಯಾರು ವೇತನ ನೀಡುತ್ತಾರೆ. ಅವರ ಕುಟುಂಬದ ಗತಿಯೇನು ನೀವು ಇವರ ರಕ್ಷಣೆಗೆ ಮಧ್ಯಪ್ರವೇಶಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.