ಬೆಂಗಳೂರು, ಮಾ.21 (DaijiworldNews/PY) : "ಕೊರೊನಾ ಭೀತಿ ಹಿನ್ನೆಲೆ ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಹಾಗೂ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಲಾಗಿದೆ" ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, "ಕೊರೊನಾ ಹಿನ್ನೆಲೆ ಸದ್ಯ ಸರ್ಕಾರದ ಮುಂದೆ ಗಡಿಪ್ರದೇಶಗಳನ್ನು ಬಂದ್ ಮಾಡುವ ಆಲೋಚನೆಯಿಲ್ಲ. ಈ ಬಗ್ಗೆ ಮೂರು ದಿನಗಳ ನಂತರ ಪರಿಸ್ಥಿತಿ ನೋಡಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ರಾಜ್ಯದ ಗಡಿ ಪ್ರದೇಶದಲ್ಲಿ ನಿಗಾ ಇಡಲಾಗಿದ್ದು ಸ್ಕ್ರೀನಿಂಗ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದರು.
"ಈಗಾಗಲೇ ಸ್ವಯಂಪ್ರೇರಿತ ಬಂದ್ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ. ಹಾಗಾಗಿ ಕೊರೊನಾ ವೈರಸ್ಗೆ ಯಾವುದೇ ಕಾರಣಕ್ಕೂ ಜನರು ಆತಂಕಗೊಳ್ಳುವಂತಹ ಹೇಳಿಕೆಗಳನ್ನು ನೀಡಬೇಡಿ" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
"ನಾವು ಮೊದಲು ವೈದ್ಯರನ್ನು ಹಾಗೂ ಪೊಲೀಸರನ್ನು ರಕ್ಷಣೆ ಮಾಡಬೇಕು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ನಮ್ಮ ಕಾರ್ಯಗಳು ಕೂಡ ಆ ನಿಟ್ಟಿನಲ್ಲಿಯೇ ಇರಬೇಕು. ಈಗಾಗಲೇ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮಾಸ್ಕ್ಗಳನ್ನು ಧರಿಸಿ ಹಾಗೂ ಸ್ಯಾನಿಟೈಸರ್ ಬಳಕೆ ಮಾಡಿ ಕಾರ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ" ತಿಳಿಸಿದರು.
"ಕರ್ಫ್ಯೂಗೆ ಯಾವುದೇ ರೀತಿಯ ಬಲವಂತದ ಅವಕಾಶವಿಲ್ಲ. ಜನರೇ ಈ ಬಗ್ಗೆ ಸ್ವಯಂ ಪ್ರೇರಿತರಾಗಿ ಬಂದ್ ಮಾಡಲು ಮುಂದೆ ಬರಬೇಕು. ಸ್ವಯಂಪ್ರೇರಿತವಾಗಿ ಬಂದ್ ಮಾಡಲು ಮುಂದಾಗದಿದ್ದರೆ ಯಾವುದೇ ಪ್ರಕರಣ ದಾಖಲು ಮಾಡುವುದಿಲ್ಲ. ಈ ವಿಚಾರವಾಗಿ ಭಯಪಡುವುದು ಬೇಡ" ಎಂದು ತಿಳಿಸಿದರು.
"ಬೆಂಗಳೂರು ಕರಗ ಆಚರಣೆ ವಿಚಾರವಾಗಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಂಬಂಧ ಪಟ್ಟವರೊಂದಿಗೆ ಈ ವಿಚಾರವಾಗಿ ಚರ್ಚೆ ನಡೆಸಿ ವಾಸ್ತವ ವಿಚಾರ ತಿಳಿಸುತ್ತೇನೆ. ಬಳಿಕ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ" ಎಂದು ಹೇಳಿದರು.