ಬೆಂಗಳೂರು, ಮಾ.21 (DaijiworldNews/PY) : "ಕೇಂದ್ರ-ರಾಜ್ಯ ಸರ್ಕಾರ ಕೊರೊನಾ ಸೋಂಕು ತಡೆಗಟ್ಟಲು ವಿಶೇಷ ಪ್ಯಾಕೇಜ್ ಘೋಷಿಸಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಯಾವುದೇ ಯೋಜನೆಯಲ್ಲಿ ಕಡಿಮೆ ಮಾಡಿದರೂ ಸರಿ. ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿಯೇ ಪ್ಯಾಕೇಜ್ ಪ್ರಕಟಿಸಬೇಕು "ಎಂದು ತಿಳಿಸಿದರು.
"ಎಲ್ಲರೂ ಕೊರೊನಾ ವ್ಯಾಪಿಸದಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಪ್ರಧಾನಿ ಮೋದಿ ಅವರ ಭಾಷಣಕ್ಕೆ ನಮ್ಮ ಬೆಂಬಲವಿದೆ. ಪಕ್ಷವು ರೋಗ ನಿಯಂತ್ರಣಕ್ಕೆ ಅಗತ್ಯವಾದ ಸಹಕಾರ ನೀಡಲು ಸಿದ್ದವಾಗಿದೆ. ಇದನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕಿದೆ. ರಾಜ್ಯದ ಜನರೂ ಸಹ ಕೈಜೋಡಿಸಬೇಕಿದೆ" ಎಂದು ಹೇಳಿದರು.
"ರಾಷ್ಟ್ರ ವ್ಯಾಪಿ ಕೊರೊನಾ ಸೋಂಕಿನಿಂದ ಉಂಟಾಗುವ ನಷ್ಟದ ಬಗ್ಗೆ ಸಮೀಕ್ಷೆ ನಡೆಸಬೇಕು. ತಡವಾಗಿಯಾದರೂ ಸರ್ಕಾರವೇ ಸರ್ವೆ ತಂಡ ರಚಿಸಬೇಕು" ಎಂದರು.
"ಕೋಳಿ, ಹೈನುಗಾರಿಕೆಗೆ ತೀವ್ರ ಹೊಡೆತ ಬಿದ್ದಿದೆ. ರೈತರು ಬೆಳೆದ ಬೆಳೆ ನಷ್ಟವಾಗಿದೆ. ಸರ್ಕಾರ ಅವರ ನೆರವಿಗೂ ಬರಬೇಕು. ಬ್ಯಾಂಕ್, ಐ.ಟಿ, ಜಿಎಸ್ಟಿ ಒತ್ತಡ ಈಗಾಗಲೇ ಹೆಚ್ಚುತ್ತಿದೆ. ಸಾಲ, ತೆರಿಗೆ ಮರುಪಾವತಿಗೆ ಒತ್ತಾಯ ಹಾಕಲಾಗುತ್ತದೆ. ಸರ್ಕಾರ ಈ ವಿಚಾರವಾಗಿ ಗಮನಹರಿಸಬೇಕು" ಎಂದು ತಿಳಿಸಿದರು.
"ಸೋಂಕು ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಯನ್ನು ಮಾತ್ರ ನಂಬಿಕೊಂಡರೆ ಕಷ್ಟ. ಖಾಸಗಿ ಆಡಳಿತದ ಆಸ್ಪತ್ರೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನೂ ಬಳಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆ, ಸಂಘಟನೆಗಳು, ಉದ್ಯಮಿಗಳು ಕೈಜೋಡಿಸಬೇಕು. ಸಮಾರೋಪಾದಿಯಲ್ಲಿ ಕಾರ್ಯ ನಡೆಯಬೇಕು" ಎಂದು ಹೇಳಿದರು.
"ದಿನನಿತ್ಯದ ಬಳಕೆ ವಸ್ತುಗಳು ಲಭ್ಯವಾಗಬೇಕು. ಪಿಂಚಣಿ ಯೋಜನೆಗೆ ಯಾವುದೇ ತೊಂದರೆ ಆಗಬಾರದು.ಕೆಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇನ್ನೂ ಕೆಲವು ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಸರ್ಕಾರ ಈ ಬಗ್ಗೆಯೂ ಗಮನವಹಿಸಬೇಕು. ಜನಸಾಮಾನ್ಯರ ದೈನಂದಿನ ಜೀವನಕ್ಕೆ ತೊಂದರೆ ಉಂಟಾಗಬಾರದು. ಬ್ಯಾಂಕ್ ಸಾಲದ ಬಡ್ಡಿ ಕಟ್ಟಲು ಸಮಯಾವಕಾಶ ಮಾಡಿಕೊಡಬೇಕು' ಎಂದರು.
"ಒಂದು ವಾರದವರೆಗೆ ಪಕ್ಷದ ಕಾರ್ಯಕರ್ತರು ಅಭಿನಂದನೆ ಸಲ್ಲಿಸಲು ಬರಬೇಡಿ. ಇರುವಲ್ಲಿಯೇ ನೀವು ಇದ್ದರೆ ಉತ್ತಮ. ಹಾಗೆ ಮಾಡುವುದರಿಂದ ಸೋಂಕು ನಿಯಂತ್ರಿಸಲು ನೆರವಾಗಬಹುದು" ಎಂದು ಹೇಳಿದರು.