ನವದೆಹಲಿ, ಮಾ.22 (Daijiworld News/MB) : ಕೊರೊನಾ ಸೋಂಕು ಶೀಘ್ರವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ನೀಡಿದ್ದ ಕರೆಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಇಂದು ಮುಂಜಾನೆಯೇ ದೇಶದ ಹಲವಾರು ಪ್ರದೇಶದಲ್ಲಿ ಬಂದ್ನ ವಾತಾವರಣ ಕಂಡು ಬಂದಿದೆ. ಪ್ರಪಂಚದಾದ್ಯಂತ ಸಾವಿರಾರತು ಜನರನ್ನು ಬಲಿ ಪಡೆದ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಂದು ದೇಶದಾದ್ಯಂತ ಸುಮಾರು ಒಂದು ಶತಕೋಟಿ ಮನೆಯೊಳಗೆ ಉಳಿದಿದ್ದಾರೆ.
ಮಾರ್ಚ್ 19 ರಂದು ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ.
ಈ ಕುರಿತಾಗಿ ಇಂದು ಮುಂಜಾನೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, "ಜನತಾ ಕರ್ಫ್ಯೂ ಆರಂಭವಾಗುತ್ತಿದೆ. ದೇಶವಾಸಿಗಳು ಈ ಅಭಿಯಾನದ ಭಾಗವಾಗಿ ಕೊರೊನಾದ ವಿರುದ್ಧದ ಹೋರಾಟವನ್ನು ಸಫಲಗೊಳಿಸಿ ಎಂದು ನಾನು ಮನವಿ ಮಾಡುತ್ತೇನೆ. ನಮ್ಮ ಸಂಕಲ್ಪ ಹಾಗೂ ಸಂಯಮ ಈ ಮಾಹಾಮಾರಿ ಕೊರೊನಾ ವೈರಸ್ನ್ನು ಉರುಳಿಸುತ್ತದೆ ಎಂದು ಹೇಳಿದ್ದಾರೆ.
ಭಾನುವಾರ ಮನೆಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿರುವ ನಾಗರಿಕರು ಶನಿವಾರವೇ ಪೇಟೆಗೆ ತೆರಳಿ ಬೇಕಾಗಿರುವ ಅಗತ್ಯ ವಸ್ತುಗಳ ಖರೀದಿಸಿದ್ದಾರೆ. ಕೊರೊನಾ ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತವೂ ಹಲವು ಕ್ರಮಗಳನ್ನು ಕೈಗೊಂಡಿದ್ದು ಕಚೇರಿಗಳಿಗೆ ತುರ್ತು ಕೆಲಸವಿಲ್ಲದೆ ಸಾರ್ವಜನಿಕರು ಬರುವಂತಿಲ್ಲ ಎಂದು ಹೇಳಿದೆ.
ಇನ್ನು ಬಸ್ ಸಂಚಾರ ಇಲ್ಲದ ಕಾರಣ ಶಿವಮೊಗ್ಗದಲ್ಲಿ ಪ್ರಯಾಣಿಕರು ಲಾರಿಗಳಲ್ಲಿ ಪ್ರಯಾಣಿಸುತ್ತಿದ್ದು ಬಸ್ ಇಲ್ಲದ ಹಿನ್ನೆಲೆ ಆಟೋಗಳಿಂದ ಅಧಿಕ ಹಣ ವಸೂಲಿ ಆರೋಪಗಳು ಕೇಳಿಬಂದಿದೆ.
ಮಂಗಳೂರಿನಲ್ಲಿ ಜನತಾ ಕರ್ಪ್ಯೂ ಭಾರೀ ಬೆಂಬಲ ದೊರೆತಿದೆ. ಹಾಲು ಪೇಪರ್ ಮಾರಾಟ ಯಾಥಾಸ್ಥಿತಿಯಲ್ಲಿದೆ. ಜನರು 7 ಗಂಟೆಗೂ ಮುನ್ನವೇ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದು ಮುಂಜಾನೆ ನಾಲ್ಕು ಗಂಟೆಗೇ ಹಾಲು ಪೇಪರ್ ಮಾರಾಟ ಆರಂಭಗೊಂಡಿದೆ.
ಇನ್ನು ಈ ಜನತಾ ಕರ್ಫ್ಯೂಗೆ ದೇಶದಾದ್ಯಂತ ಭಾರೀ ಬೆಂಬಲ ದೊರೆತಿದೆ.