ನವದೆಹಲಿ, ಮಾ.22 (Daijiworld News/MB) : ದೇಶದ ಆರ್ಥಿಕತೆಯ ಪುನರ್ ಜೀವನಕ್ಕಾಗಿ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು. ಇಂದು ಚಪ್ಪಾಳೆಯಲ್ಲ ಆರ್ಥಿಕ ಪ್ಯಾಕೇಜ್ನ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ವೈರಸ್ ಹಬ್ಬುವಿಕೆಯನ್ನು ತಡೆಯಲು ಶ್ರಮಿಸುತ್ತಿರುವರಿಗಾಗಿ ಮಾ.22 ರ ಜನತಾ ಕರ್ಫ್ಯೂ ಸಂದರ್ಭದಲ್ಲಿ ಸಂಜೆ ಐದು ಗಂಟೆಗೆ ಚಪ್ಪಾಳೆಗಳನ್ನು ಬಾರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಕರೆ ನೀಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೊರೊನಾ ವೈರಸ್ ನಮ್ಮ ದುರ್ಬಲಗೊಂಡಿರುವ ಆರ್ಥಿಕತೆಯ ಮೇಲೆ ಗಂಭೀರ ದಾಳಿ ನಡೆಸಿದೆ. ದಿನಗೂಲಿ ಕಾರ್ಮಿಕರಿಗೆ, ಸಣ್ಣ, ಮಧ್ಯಮ ಉದ್ಯಮಿಗಳು ಈ ಕೊರೊನಾ ವೈರಸ್ನಿಂದಾಗಿ ಸಂಕಷ್ಟದಲ್ಲಿದ್ದಾರೆ. ಚಪ್ಪಾಳೆಯಿಂದಾಗಿ ಅವರಿಗೆ ಸಹಾಯ ಲಭಿಸುವುದಿಲ್ಲ. ಇಂದು ಬೃಹತ್ ಹಣಕಾಸು ಪ್ಯಾಕೇಜ್ನಡಿ ನಗದು ಪರಿಹಾರ, ತೆರಿಗೆ ರಿಯಾಯಿತಿಗಳ ಅಗತ್ಯವಿದೆ, ಅದರೊಂದಿಗೆ ಸಾಲಗಳ ಮರುಪಾವತಿ ಹೊರೆಯಿಂದಲೂ ಪರಿಹಾರ ದೊರೆಯಬೇಕಾಗಿದೆ. ಇದಕ್ಕಾಗಿ ಆರ್ಥಿಕ ಪ್ಯಾಕೇಜ್ನ ಅಗತ್ಯವಿದೆ. ಇದಕ್ಕಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.