ಬೆಂಗಳೂರು, ಮಾ.22 (DaijiworldNews/PY) : ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಈ ಸಂದರ್ಭ ಜನ ಯಾವುದೇ ವ್ಯವಹಾರ ಮಾಡುವುದಿದ್ದರೂ ಡಿಜಿಟಲ್ ಪೇಮೆಂಟ್ ಮಾರ್ಗವನ್ನು ಉಪಯೋಗಿಸುವುದು ಉತ್ತಮ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕೊರೊನಾ ವೈರಸ್ನಿಂದ ದೂರವಿರಲು ಡಿಜಿಟಲ್ ಪೇಮೆಂಟ್ನ ಅಗತ್ಯತೆ ಮತ್ತು ಉಪಯುಕ್ತತೆ ಬಗ್ಗೆ ವಿಡಿಯೊ ಮಾಡಿ ಉದ್ಯಮಿ ಮೋಹನ್ ದಾಸ್ ಪೈ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಸುರಕ್ಷಿತವಾಗಿ ಪಾವತಿಸಿ, ಸುರಕ್ಷಿತವಾಗಿರಿ ಎಂದು ಬರೆದಿರುವ ಅವರ ವಿಡಿಯೋವನ್ನು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರೀಟ್ವೀಟ್ ಮಾಡಿಕೊಂಡಿದ್ದಾರೆ.
ಇದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಕಾಲ, ಅದಕ್ಕೆ ಡಿಜಿಟಲ್ ಪೇಮೆಂಟ್ ಸಹಕಾರಿ ಎಂದು ತಮ್ಮ ರೀಟ್ವೀಟ್ನಲ್ಲಿ ಪ್ರಧಾನಿ ಮೋದಿ ಅವರು ಬರೆದುಕೊಂಡಿದ್ದಾರೆ.