ನವದೆಹಲಿ, ಮಾ.22 (DaijiworldNews/PY) : ಕೊರೊನಾ ವೈರಸ್ ಭೀತಿ ಹಿನ್ನಲೆ ಇಟಲಿಯಿಂದ 263 ಮಂದಿ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನವು ದೆಹಲಿ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಿಗ್ಗೆ ತಲುಪಿದೆ.
ದೆಹಲಿಗೆ ವಿಮಾನವು ಬೆಳಿಗ್ಗೆ 9.15ಕ್ಕೆ ಬಂದಿಳಿದಿದ್ದು, ಭಾರತ ಸರ್ಕಾರವು ಇಟಲಿಯಿಂದ ಸುರಕ್ಷಿತವಾಗಿ ಕರೆತಂದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಅವರೆಲ್ಲರನ್ನೂ ಇಂಡೋ-ಟಿಬೆಟನ್ ಗಡಿ ಪೊಲೀಸರ ಮುಂದಾಳುತ್ವದಲ್ಲಿ ಛಾವ್ಲಾದಲ್ಲಿ ನಡೆಯುತ್ತಿರುವ ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಗಿದೆ. ಕೊರೊನಾ ಸಮಸ್ಯೆಯಿಂದಾಗಿ ವಿದೇಶದಿಂದ ವಾಪಾಸ್ಸಾಗಿದ್ದವರನ್ನು ಈಗಿನ ನಿಯಮಾವಳಿ ಪ್ರಕಾರ ತಪಾಸಣೆ ಮಾಡಲಾಗುತ್ತದೆ ಹಾಗೂ 14 ದಿನಗಳ ಕಡ್ಡಾಯ ಪ್ರತ್ಯೇಕ ವಾಸಕ್ಕೆ ಸೂಚಿಸಲಾಗುತ್ತಿದೆ.
ಈ 263 ಮಂದಿಯನ್ನೂ ದೆಹಲಿ ವಿಮಾನ ನಿಲ್ದಾಣದಲ್ಲಿರುವ ಪ್ರತ್ಯೇಕವಾದ ಲಾಂಜ್ನಲ್ಲಿ ಇಳಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಹಾಗೂ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ. ಇಟಲಿಯಲ್ಲಿ 47 ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, 5 ಸಾವಿರದಷ್ಟು ಮಂದಿ ಮೃತಪಟ್ಟಿದ್ದಾರೆ.
ಭಾರತ ಸರ್ಕಾರವು ಈ ಹಿಂದೆ ಇಟಲಿಯ ಮಿಲಾನ್ನಿಂದ 218 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದ್ದು, ರೋಮ್ನಿಂದ ಭಾನುವಾರ 263 ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದೆ.