ನವದೆಹಲಿ, ಮಾ.22 (Daijiworld News/MB) : ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಮಾರ್ಚ್ 31 ರ ತನಕ ಎಲ್ಲಾ ಪ್ರಯಾಣಿಕ ರೈಲುಗಳು ಬಂದ್ ಆಗಲಿವೆ. ಕೇವಲ ಸರಕು ಸಾಗಣಿಕ ರೈಲುಗಳು ಮಾತ್ರ ಸಂಚಾರ ಮಾಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮಾರ್ಚ್ 31 ರ ಬಳಿಕ ಮತ್ತೊಮ್ಮೆ ಸಭೆ ಸೇರಲಿರುವ ರೈಲ್ವೆ ಮಂಡಳಿಯು ರೈಲು ಬಂದ್ ಮುಂದುವರಿಸಬೇಕೇ, ಬೇಡವೇ ಎಂದು ನಿರ್ಧರಿಸಲಿದೆ ಎಂದು ಹೇಳಿದೆ.
ಈವರೆಗೆ 400 ಮೇಲ್/ಎಕ್ಸ್ಪ್ರೆಸ್ ರೈಲುಗಳು ತನ್ನ ಪ್ರಯಾಣ ಮುಂದುವರಿಸಿದ್ದು, ಈ ರೈಲುಗಳು ಗಮ್ಯಸ್ಥಳ ತಲುಪಿದ ಬಳಿಕ ಬೇರೆ ಯಾವುದೇ ರೈಲುಗಳು ಯಾವುದೇ ರೈಲ್ವೆ ನಿಲ್ದಾಣದಿಂದ ಹೊರಡುವುದಿಲ್ಲ. ಹೆಚ್ಚು ಪ್ರಯಾಣಿಕರು ಒಂದೇ ಕಡೆ ನಿಲ್ಲಲು ಅವಕಾಶ ಇಲ್ಲದ ಕಾರಣ ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು ಖಾಲಿಯಾಗಿವೆ.