ದೊಡ್ಡಬಳ್ಳಾಪುರ, ಮಾ.22 (DaijiworldNews/PY) : ಕೊರೊನ ವೈರಸ್ ಹಿನ್ನೆಲೆ ಮಾ.23ರಂದು ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕಲಾವತಿ ತಿಳಿಸಿದ್ದಾರೆ.
ಮಾ.23 ಸೋಮವಾರದಂದು ಇಂಗ್ಲಿಷ್ ಭಾಷೆ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ತಮ್ಮಲ್ಲಿ ಲಭ್ಯವಿರುವ ಮಾಸ್ಕ್, ಕರವಸ್ತ್ರ ಇತ್ಯಾದಿ ಯಾವುದೇ ಉಪಯುಕ್ತ ಬಟ್ಟೆಯಿಂದ ಬಾಯಿ ಹಾಗೂ ಮೂಗನ್ನು ಮುಚ್ಚಿಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ.
ಮಾ.27ರಿಂದ ಆರಂಭವಾಗಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಲು ಸರ್ಕಾರ ತೀರ್ಮಾನಿಸಿದೆ. ಆದರೆ, ದ್ವಿತೀಯ ಪಿಯುಸಿ ಪರೀಕ್ಷೆಗಳು ಕೊನೆಗೊಳ್ಳಲು ಇನ್ನೊಂದೇ ವಿಷಯ ಬಾಕಿ ಉಳಿದಿರುವ ಕಾರಣ ಅದನ್ನು ಎಂದಿನಂತೇ ಸೋಮವಾರ ನಡೆಸಲು ನಿರ್ಧರಿಸಲಾಗಿದೆ. ಸೋಮವಾರ ನಡೆಯಲಿರುವ ದ್ವಿತೀಯ ಪಿಯು ಅಂತಿಮ ವಿಷಯದ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.