ಬೆಂಗಳೂರು, ಮಾ.23 (Daijiworld News/MB) : ಚಿತ್ರ ನಟ ರಜನಿಕಾಂತ್ ಜನತಾ ಕರ್ಫ್ಯೂ ಕುರಿತಾಗಿ ಮಾಡಿದ್ದ ಟ್ವೀಟ್ ಅನ್ನು ಟ್ವಿಟರ್ ಸಂಸ್ಥೆಯು ಅಳಿಸಿಹಾಕಿದೆ. ರಜನಿ ಅವರ ಈ ಸಂದೇಶವು ಜನರಿಗೆ ತಪ್ಪು ಮಾಹಿತಿ ನೀಡುತ್ತದೆ ಎಂದು ಅನೇಕರು ಹೇಳಿದ ಕಾರಣದಿಂದಾಗಿ ಟ್ವೀಟರ್ ರಜನಿ ಟ್ವೀಟ್ನ್ನು ಅಳಿಸಿಹಾಕಿದೆ ಎಂದು ತಿಳಿದು ಬಂದಿದೆ.
ರಜನಿಕಾಂತ್ ಟ್ವಿಟರ್ನಲ್ಲಿ ವಿಡಿಯೊ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದು ಅದರಲ್ಲಿ, "ಕೊರೊನಾ ವೈರಸ್ ಭಾರತದಲ್ಲಿ ಎರಡನೇ ಹಂತದಲ್ಲಿದೆ. ಈ ವೈರಸ್ ಜನರ ಮೂಲಕ ಸಾಂಕ್ರಾಮಿಕವಾಗಿ ಹರಡುವ ಕಾರಣದಿಂದಾಗಿ ಜನರು ಮನೆಯಲ್ಲಿಯೇ ಇದ್ದು ಈ ವೈರಸ್ ಇನ್ನಷ್ಟು ಸಾಂಕ್ರಾಮಿಕವಾಗಿ ಹರಡದಂತೆ ತಡೆಯಬೇಕು. 12ರಿಂದ 14 ಗಂಟೆಗಳ ಕಾಲ ಎಲ್ಲರೂ ಮನೆಯಲ್ಲೇ ಉಳಿದರೆ ವೈರಸ್ ಜೀವಂತವಾಗಿ ಇರುವುದಿಲ್ಲ. ಸಾಂಕ್ರಾಮಿಕವಾಗಿ ಹರಡುವುದು ತಪ್ಪುತ್ತದೆ ಎಂದಿದ್ದರು.
ಇಟಲಿ ಸರ್ಕಾರ ಕರ್ಫ್ಯೂ ಹೇರಿ ವೈರಸ್ ಮೂರನೇ ಹಂತದಲ್ಲಿ ಹರಡದಂತೆ ತಡೆಯುವ ಯತ್ನ ಮಾಡಿತ್ತು. ಆದರೆ ಅದಕ್ಕೆ ಜನರು ಸಹಕಾರ ನೀಡಲಿಲ್ಲ. ಈಗ ಸಾವಿರಾರು ಜನರು ಇಟಲಿಯಲ್ಲಿ ಈ ವೈರಸ್ಗೆ ಬಲಿಯಾಗಿದ್ದಾರೆ. ಆದ್ದರಿಂದ ಜನತಾ ಕರ್ಫ್ಯೂಗೆ ಎಲ್ಲರೂ ಬೆಂಬಲ ನೀಡಿ, ಮನೆಯಲ್ಲಿಯೇ ಉಳಿಯಬೇಕೆಂಬುದು ನನ್ನ ಮನವಿ ಎಂದು ಹೇಳುವ ವಿಡಿಯೋವೊಂದನ್ನು ಹಾಕಿದ್ದರು.
ಆದರೆ ಇದು ತಪ್ಪು ಮಾಹಿತಿ ನೀಡುತ್ತದೆ. 12ರಿಂದ 14 ಗಂಟೆಗಳ ಕಾಲ ಮನೆಯಲ್ಲಿಯೇ ಇದ್ದರೆ ವೈರಸ್ ಜೀವಂತವಾಗಿ ಇರುವುದಿಲ್ಲ ಎಂಬುದು ಸುಳ್ಳು ಮಾಹಿತಿ. ಮನೆಯಲ್ಲಿಯೇ ಇದ್ದರೆ ಈ ಸೋಂಕು ಸಾಂಕ್ರಾಮಿಕ ಮೂರನೇ ಹಂತದಲ್ಲಿ ಹರಡುವುದನ್ನು ತಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಸಿದ್ದಾರೆ.
ಇದಾದ ಬಳಿಕ ಟ್ವೀಟರ್ ಈ ಟ್ವೀಟ್ನ್ನು ಅಳಿಸಿ ಹಾಕಿದ್ದು ಟ್ವಿಟರ್ನ ನಿಯಮಗಳನ್ನು ಈ ಟ್ವೀಟ್ ಉಲ್ಲಂಘನೆ ಮಾಡುವ ಕಾರಣದಿಂದಾಗಿ ಈ ಟ್ವೀಟ್ ಲಭ್ಯವಿಲ್ಲ ಎಂದು ಸಂದೇಶ ಹಾಕಲಾಗಿದೆ.