ಬೆಂಗಳೂರು, ಮಾ.23 (Daijiworld News/MB) : ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 144 ಸೆಕ್ಷನ್ ಮುಂದುವರಿಯಲಿದೆ. ರಾಜ್ಯಾದ್ಯಂತ ಲಾಕ್ಡೌನ್ ಸೇರಿದಂತೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ವಿಪಕ್ಷಗಳೊಂದಿಗೆ ಚರ್ಚಿಸಿ ಇಂದು ಸಂಜೆ ತೀರ್ಮಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡವರ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ದಿನವಿಡೀ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಸದ್ಯ ಕ್ವಾರಂಟೈನ್ನಲ್ಲಿ ಇಡುವುದು ಸವಾಲಿನ ಕೆಲಸವಾಗುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ 30 ಫೀವರ್ ಕ್ಲಿನಿಕ್ ಆರಂಭ ಮಾಡಲಾಗುವುದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 100 ಬೆಡ್ಗಳನ್ನು ಕೊರೊನಾ ಚಿಕಿತ್ಸೆಗೆಂದೇ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಅನಿರ್ದಿಷ್ಟಾವಧಿಯವರೆಗೆ ನಿರ್ಬಂಧಿಸಲಾಗುವುದು ಎಂದು ಹೇಳಿದ್ದಾರೆ.