ವಿಜಯಪುರ, ಮಾ 23 (Daijiworld News/MSP): ವೇಗವಾಗಿ ಹರಡುತ್ತಿರುವ ಕೋವಿಡ್-19 ನಿಯಂತ್ರಣಕ್ಕೆ ತುರ್ತುಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೋಮ್ ಕ್ವಾರಂಟೈನ್ ನಿರ್ದೇಶನ ಪಾಲಿಸದ ಮೂವರ ವಿರುದ್ದ ಕಾನೂನಿನ ರಿತ್ಯ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕೋವಿಡ್-19 ನಿಯಂತ್ರಣ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ನಡೆಸಿದ ಅವರು ವಿಶ್ವ ಮತ್ತು ದೇಶದಾದ್ಯಂತ ಹಾಗೂ ನೆರೆ-ಹೊರೆ ಜಿಲ್ಲೆಗಳಿಗೂ ವ್ಯಾಪಿಸಿರುವ ಕೋವಿಡ್-19 ನಿಯಂತ್ರಣಕ್ಕೆ ನಿರ್ದೇಶನಗಳನ್ನು ಸರ್ಕಾರ ನೀಡಿದೆ. ಅದರನ್ವಯ ಜಿಲ್ಲೆಯಲ್ಲಿ ಹೋಮ್ಕ್ವಾರಂಟೈನ್ ಅವಧಿಯಲ್ಲಿ ನಿರ್ದೇಶನ ಪಾಲನೆಗೆ ಸೂಚಿಸಿದ್ದರೂ ಕೂಡಾ ಸಾರ್ವಜನಿಕರ ಹಿತದೃಷ್ಟಿಯನ್ನು ಕಾಪಾಡದೆ ವ್ಯತಿರಿಕ್ತವಾಗಿ ನಡೆದ ಮೂವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನಿನ ರಿತ್ಯ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ತಜ್ಞ ವೈದ್ಯರು, ಪೋಲಿಸ್ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಇಲಾಖೆಗಳ ಹಿರಿಯ ಅಧಿಕಾರಿಗಳ ಚಿಂತನೆ ಮತ್ತು ಸಲಹೆ ಮೇರೆಗೆ ಹೋಮ್ಕ್ವಾರಂಟೈನ್ ವ್ಯವಸ್ಥೆ ಪರಿಣಾಮಕಾರಿ ಜಾರಿಗೆಗೆ ಕ್ರಮಕೈಗೊಂಡಿದೆ. ಹೋಮ್ಕ್ವಾರಂಟೈನ್ದಲ್ಲಿರುವವರು 14 ದಿನಗಳ ಕಾಲ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಬೇಕಾಗಿದ್ದು, ನಿರ್ದೇಶನಗಳನ್ನು ಪಾಲಿಸದೆ ಮನೆಯಿಂದ ಹೊರಗೆ ಹೋಗುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಸೂಕ್ತ ಆರೋಗ್ಯ ಚಿಕಿತ್ಸೆಗೆ ಸ್ಪಂದಿಸದೆ ಇರುವುದು, ಸ್ಟಾಂಪಿಂಗ್ ಮಾಡಿಕೊಳ್ಳಲು ನಿರಾಕರಿಸುವುದು, ವಿದೇಶದಿಂದ ಆಗಮಿಸಿದ್ದರೂ ನಿಗದಿತ ಸಮಯಕ್ಕೆ ವರದಿ ಮಾಡಿಕೊಳ್ಳದೇ ಇರುವುದು ಸೇರಿದಂತೆ ಇತರ ನಿರ್ದೇಶನ ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಅದರಂತೆ ಈಗಾಗಲೇ ಹೋಮ್ಕ್ವಾರಂಟೈನ್ದಲ್ಲಿರುವವರ ನಿಗಾಕ್ಕೆ ಸಾರ್ವಜನಿಕರ ಕಣ್ಗಾವಲು, ಪೋಲಿಸ್ ಮತ್ತು ಆರೋಗ್ಯ ಸಿಬ್ಬಂಧಿಗಳ ನಿಯೋಜನೆ ಮಾಡಿದ್ದು ಈ ಸಿಬ್ಬಂದಿಗಳು ನಿರ್ಲಕ್ಷತೋರಿದಲ್ಲಿ ಅವರ ವಿರುದ್ದವು ಸೂಕ್ತಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಕ್ಕದ ಜಿಲ್ಲೆಗಳಾದ ಮಹಾರಾಷ್ಟ್ರ ಮತ್ತು ಕಲಬುರ್ಗಿಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳು ಕಂಡುಬಂದಿದ್ದು ಇದರ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ 144 ಕಲಂ ರನ್ವಯ ಇಂದಿನಿಂದ ಮಾರ್ಚ 31 ರ ಮಧ್ಯರಾತ್ರಿಯವರೆಗೆ ನಿಷೇದಾಜ್ಞೆಯನ್ನು ಜಾರಿಗೊಳಸಲಾಗುತ್ತಿದೆ. ಇದರನ್ವಯ 5ಕ್ಕಿಂತ ಹೆಚ್ಚು ಜನ ಕೂಡಿ ತಿರುಗಾಡುವುದು ನಿಷೇಧಿಸಿದೆ. ಹೆಚ್ಚು ಜನರು ಸೇರುವ ಮಾರುಕಟ್ಟೆ, ಮಾಲ್, ಸುಪರ್ಬಜಾರ್, ಬಾರ್ ಮತ್ತು ರೆಸ್ಟಾರೆಂಟ್ ಹಾಗೂ ಢಾಬಾ ಬಂದ್ ಮಾಡಲು ಸೂಚಿಸಿದೆ. ಹೋಟೆಲ್ಗಳಿಂದ, ಎಮ್.ಎಸ್.ಐ.ಎಲ್, ವೈನ್ಶಾಪ್ಗಳಲ್ಲಿ ಪಾರ್ಸಲ್ ಮಾತ್ರ ಪಡೆಯಲು ಮಾತ್ರ ಸೂಚಿಸಿದೆ. ಪ್ರಾರ್ಥನಾ ಸ್ಥಳಗಳಲ್ಲಿ ಹೆಚ್ಚು ಜನರು ಸೇರುವುದನ್ನು ನಿರ್ಭಂಧಿಸಿದೆ ಎಂದು ಹೇಳಿದರು.