ಬೆಂಗಳೂರು, ಮಾ 23 (DaijiworldNews/SM): ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಲಾಕ್ಡೌನ್ ಮಾಡಿ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಈ ಹಿಂದೆ ಮಂಗಳೂರು ಸೇರಿದಂತೆ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿತ್ತು. ಆದರೆ, ಸೋಮವಾರ ರಾತ್ರಿಯಿಂದ ಮಾ.31ರವರೆಗೆ ಕರ್ನಾಟಕ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ರಾಜ್ಯಸರಕಾರ ಹೊರಡಿಸಿರುವ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಇನ್ನು ಇಡೀ ಕರ್ನಾಟಕ ರಾಜ್ಯದಲ್ಲಿ ಮಾರ್ಚ್ 31ರ ತನಕ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲವೂ ಬಂದ್ ಆಗಿರಲಿದೆ. ಸಾರ್ವಜನಿಕರು ಸರಕಾರ ಹೊರಡಿಸಿರುವ ಆದೇಶವನ್ನು ಅಚ್ಚುಕಟ್ಟಾಗಿ ಪಾಲಿಸುವ ಅಗತ್ಯತೆ ಇದೆ. ಕೊರೊನಾ ಸೋಂಕು ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜವಾಬ್ದಾರಿಯುತ ನಾಗರಿಕರೆಲ್ಲರೂ ಮನೆಯಲ್ಲೇ ಇದ್ದುಕೊಂಡು ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಬೇಕಾಗಿದೆ.